ನವದೆಹಲಿ: ಅರುಣಾಚಲ ಪ್ರದೇಶದ ಮೇಲೆ ಚೀನಾದ ಅಸಂಬದ್ಧ ಹಕ್ಕನ್ನು ಭಾರತ ಖಂಡಿಸುತ್ತದೆ. ಅದು ಯಾವಾಗಲೂ ಭಾರತದ ಅವಿಭಾಜ್ಯ ಅಂಗ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿದೆ.
ಚೀನಾ ರಕ್ಷಣಾ ಸಚಿವಾಲಯದ ವಕ್ತಾರರು ಅಸಂಬದ್ಧ ಹಕ್ಕನ್ನು ಪ್ರತಿಪಾದಿಸಿರುವುದನ್ನು ಗಮನಿಸಿದ್ದೇವೆ. ಇದನ್ನು ಭಾರತ ಖಂಡಿಸುತ್ತದೆ ಮತ್ತು ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗ ಮತ್ತು ಬೇರ್ಪಡಿಸಲಾಗದ ಭಾಗ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ಮೇಲೆ ಚೀನಾ ಸೇನೆಯು ತನ್ನ ಹಕ್ಕನ್ನು ಪುನರುಚ್ಚರಿಸಿದ ಕೆಲವು ದಿನಗಳ ನಂತರ ಎಂಇಎ ಈ ಪ್ರತಿಕ್ರಿಯೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಇತ್ತಿಚೀಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಬೀಜಿಂಗ್ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಇದರ ಬೆನ್ನಲ್ಲೇ ಈ ಪ್ರದೇಶ "ಚೀನಾ ಭೂಪ್ರದೇಶದ ಅಂತರ್ಗತ ಭಾಗ" ಎಂದು ಕರೆದಿತ್ತು.
ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರರು ನೀಡಿದ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ MEA ಈ ಪ್ರಕಟಣೆ ನೀಡಿದೆ.
"ಈ ವಿಷಯದಲ್ಲಿ ಆಧಾರರಹಿತ ವಾದಗಳನ್ನು ಪುನರಾವರ್ತಿಸುವುದಕ್ಕೆ ಯಾವುದೇ ಮಾನ್ಯತೆಯನ್ನು ನೀಡುವುದಿಲ್ಲ. ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಅಂಗ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಅದರ ಜನರು ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯ ಯೋಜನೆಗಳಿಂದ ಪ್ರಯೋಜನ ಪಡೆಯುವುದನ್ನು ಮುಂದುವರಿಸುತ್ತಾರೆ" ಎಂದು ಎಂಇಎ ತಿಳಿಸಿದೆ.
ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ಜಾಂಗ್ ಕ್ಸಿಯೋಗಾಂಗ್ ಅವರು, ಝಾಂಗ್ನಾನ್ ನ ದಕ್ಷಿಣ ಭಾಗ (ಟಿಬೆಟ್ ಗೆ ಚೀನಾ ಇಟ್ಟಿರುವ ಹೆಸರು) ಚೀನಾದ ಭೂಪ್ರದೇಶದ ಅನಿಭಾಜ್ಯ ಅಂಗ. ಇದನ್ನು ಭಾರತ ಅಕ್ರಮವಾಗಿ ತನ್ನದು ಎಂದು ಹೇಳುತ್ತಿದೆ. ಇದನ್ನು ಚೀನಾ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಮತ್ತು ಬಲವಾಗಿ ವಿರೋಧಿಸುತ್ತದೆ" ಎಂದು ಹೇಳಿದ್ದರು.