ನವದೆಹಲಿ:ಭಾರತದಲ್ಲಿನ ಸಿಮ್ ಬದಲಾವಣೆ ಹಗರಣವನ್ನು ತಗ್ಗಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಇತ್ತೀಚೆಗೆ ಮೊಬೈಲ್ ನಂಬರ್ ಪೋರ್ಟಬಿಲಿಟಿಯಲ್ಲಿ ಬದಲಾವಣೆಗಳನ್ನು ತರುವುದಾಗಿ ಪ್ರಕಟಿಸಿತ್ತು. ಹೊಸ ನಿಯಮಗಳ ಪ್ರಕಾರ, ಯಾರಾದರೂ ಸಿಮ್ ಕಳೆದುಕೊಂಡರೆ ಅಥವಾ ಸಿಮ್ ಹಾನಿಗೊಳಗಾಗಿ ಹೊಸ ಸಿಮ್ ಖರೀದಿಸಿದರೆ, ಅಂಥವರು ಮುಂದಿನ 7 ದಿನಗಳ ಕಾಲ ಹೊಸ ಸಿಮ್ ಅನ್ನು ಪೋರ್ಟ್ ಮಾಡಲು ಅವಕಾಶವಿಲ್ಲ.
ಈ ಹೊಸ ನಿಯಮಾವಳಿಗಳನ್ನು ದೂರಸಂಪರ್ಕ ಇಲಾಖೆಯ ಸಲಹೆ ಹಾಗೂ ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ನಂತರ ರೂಪಿಸಲಾಗಿದೆ ಎಂದು ಟ್ರಾಯ್ ಹೇಳಿದೆ. ಇದಲ್ಲದೆ, ಈ ನಿಯಮಗಳು ಜುಲೈ 1ರ ನಂತರ ಜಾರಿಗೆ ಬರಲಿವೆ ಎಂದೂ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಹೇಳಿದೆ.
ಪೋರ್ಟಬಿಲಿಟಿ ನಿಯಮಗಳಲ್ಲಿನ ಬದಲಾವಣೆಯ ಹಿಂದಿರುವ ಚಿಂತನೆಯ ಕುರಿತು ವಿವರಿಸಿರುವ ಟ್ರಾಯ್, "ವಂಚಕ ಮಾರ್ಗದಲ್ಲಿ ಮೊಬೈಲ್ ನಂಬರ್ ಗಳನ್ನು ಪೋರ್ಟ್ ಮಾಡುವ ಅಭ್ಯಾಸವನ್ನು ತಗ್ಗಿಸಲು ಅಥವಾ ನಿರ್ಲಜ್ಜ ಸಾಧನಗಳ ಮೂಲಕ ಬದಲಾವಣೆ ಮಾಡಿಕೊಳ್ಳುವುದನ್ನು ತಡೆಯಲು ಈ ತಿದ್ದುಪಡಿ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ" ಎಂದು ಹೇಳಿದೆ.
ಮೊಬೈಲ್ ಪೋರ್ಟಬಿಲಿಟಿ ಸೌಲಭ್ಯವು ಬಳಕೆದಾರರು ತಮ್ಮ ಹಾಲಿ ಸೇವಾದಾರರ ಸೇವೆಯಿಂದ ಅತೃಪ್ತರಾಗಿದ್ದರೆ, ತಮ್ಮ ಭೌಗೋಳಿಕ ಎಲ್ಲೆಯನ್ನು ಮೀರಿ ತಮ್ಮ ಮೊಬೈಲ್ ನಂಬರ್ ಗಳನ್ನು ಪೋರ್ಟ್ ಮಾಡಲು ಅವಕಾಶ ಒದಗಿಸುತ್ತದೆ. ಆದರೆ, ವಂಚಕರು ಹಾಲಿ ಜಾರಿಯಲ್ಲಿರುವ ಮೊಬೈಲ್ ನಂಬರ್ ಪೋರ್ಟಿಬಿಲಿಟಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವಂತೆ ಕಂಡು ಬರುತ್ತಿದ್ದು, ಇದರಿಂದಾಗಿ ಟ್ರಾಯ್ ಇತ್ತೀಚಿನ ಬದಲಾವಣೆಗಳನ್ನು ಘೋಷಿಸಿದೆ.