ನವದೆಹಲಿ: 2024ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಕೆಲವೇ ದಿನಗಳಲ್ಲಿ, ಪ್ರತಿಪಕ್ಷ ನಾಯಕರು ಮತ್ತು ಡಿಜಿಟಲ್ ಹಕ್ಕುಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ 'ವಿಕಸಿತ ಭಾರತ' ವಾಟ್ಸಾಪ್ ಸಂದೇಶ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಕೇಂದ್ರ ಸರ್ಕಾರ ಅನಧಿಕೃತವಾಗಿ ಜನರ ಸಂಪರ್ಕ ಸಂಖ್ಯೆಗೆ ವಿಕಸಿತ ಭಾರತದ ಸಂದೇಶವನ್ನು ವಾಟ್ಸ್ಆ್ಯಪ್ ಮೂಲಕ ರವಾನಿಸುತ್ತಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ಮಾಹಿತಿ ಪಡೆದು ಮೆಸೇಜ್ ಕಳುಹಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರ ಪತ್ರದೊಂದಿಗೆ ‘ವಿಕಸಿತ ಭಾರತ ಸಂಪರ್ಕ’ ವಾಟ್ಸಾಪ್ ಸಂದೇಶಗಳು ಸ್ಮಾರ್ಟ್‌ಫೋನ್‌ಗಳಿಗೆ ಬರುತ್ತಿದಂತೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಬಿಜೆಪಿಯ ಪಕ್ಷಪಾತದ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಕೇಂದ್ರ ಸರ್ಕಾರಿ ಯಂತ್ರ ಮತ್ತು ಡೇಟಾವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಚುನಾವಣಾ ಆಯೋಗದ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿದೇಶದಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಗೆ ಪ್ರಧಾನಿ ಹೆಸರಿನಲ್ಲಿ ಕಳುಹಿಸಿರುವ ವಿಕಸಿತ ಭಾರತ ಸಂದೇಶವನ್ನು ಉಲ್ಲೇಖಿಸಿರುವ ತರೂರ್, ಈ ಸಂದೇಶವನ್ನು ಸ್ವೀಕರಿಸಿದ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಫೋನ್‌ಗೆ ಸ್ವೀಕರಿಸಿದ ವಾಟ್ಸ್ಆ್ಯಪ್ ಸಂದೇಶವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮತ್ತೊಬ್ಬ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು, ಈ ಅನಪೇಕ್ಷಿತ ಸಂದೇಶವು ನನಗೆ ಬಂದಿದೆ. ಇದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ಬಂದಂತೆ ತೋರುತ್ತಿದೆ. ಇದು ಮಾದರಿ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.