ನವದೆಹಲಿ: ಇಡೀ ದೇಶವೇ ತನ್ನ ಕುಟುಂಬ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಇಂದು (ಸೋಮವಾರ) ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ಬದಲಿಸುವ ಮೂಲಕ 'ಮೋದಿ ಕಾ ಪರಿವಾರ್' (ಮೋದಿ ಅವರ ಕುಟುಂಬ) ಎಂದು ಬರೆದುಕೊಂಡಿದ್ದಾರೆ.
'ಪ್ರಧಾನಿ ಮೋದಿ ಅವರಿಗೆ ಕುಟುಂಬವಿಲ್ಲ' ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಮೋದಿ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ತೆಲಂಗಾಣದ ಆದಿಲಾಬಾದ್‌ನಲ್ಲಿ ಇಂದು ನಡೆದ ರ‍್ಯಾಲಿಯಲ್ಲಿ ಮಾತನಾಡಿರುವ ಮೋದಿ, 'ದೇಶದಲ್ಲಿನ 'ರಾಜವಂಶದ ಪಕ್ಷಗಳು' ವಿಭಿನ್ನ ಮುಖಗಳನ್ನು ಹೊಂದಿರಬಹುದು. ಆದರೆ 'ಲೂಟಿ' ಮಾಡುವುದೇ ಅವರ ಉದ್ದೇಶ. ದೇಶದ 140 ಕೋಟಿ ಜನರು ನನ್ನ ಕುಟುಂಬ ಎಂದು ಭಾವಿಸುತ್ತೇನೆ' ಎಂದು ಹೇಳುವ ಮೂಲಕ ಲಾಲು ಪ್ರಸಾದ್ ಯಾದವ್ ಅವರಿಗೆ ತಿರುಗೇಟು ನೀಡಿದ್ದಾರೆ.