ಇಟಾನಗರ: ಅರುಣಾಚಲ ಪ್ರದೇಶದ ಲಾಂಗ್‌ಡಿಂಗ್ ಜಿಲ್ಲೆಯಲ್ಲಿ ಚುನಾವಣಾ ವಿಚಕ್ಷಣ ದಳದ ಸಿಬ್ಬಂದಿ ವಾಹನವೊಂದರಲ್ಲಿ ತುಂಬಿದ್ದ ₹1 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಟಾನಗರ: ಅರುಣಾಚಲ ಪ್ರದೇಶದ ಲಾಂಗ್‌ಡಿಂಗ್ ಜಿಲ್ಲೆಯಲ್ಲಿ ಚುನಾವಣಾ ವಿಚಕ್ಷಣ ದಳದ ಸಿಬ್ಬಂದಿ ವಾಹನವೊಂದರಲ್ಲಿ ತುಂಬಿದ್ದ ₹1 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ಸಂಜೆ ಕನುಬರಿ ಚೆಕ್ ಗೇಟ್ ಬಳಿ ತಪಾಸಣೆ ನಡೆಸುವ ವೇಳೆ ವಾಹನವೊಂದರಲ್ಲಿ ಹಣ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಕೂಡಲೇ ವಾಹನ ಮತ್ತು ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಣ ಪತ್ತೆಯಾಗಿರುವ ವಾಹನವು ಖಾಸಗಿ ನಿರ್ಮಾಣ ಕಂಪನಿಯ ನಿರ್ದೇಶಕ ಹರ್ಷವರ್ಧನ್ ಸಿಂಗ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಚುನಾವಣಾ ರ್‍ಯಾಲಿಗಾಗಿ ಲಾಂಗ್‌ಡಿಂಗ್ ಜಿಲ್ಲೆಗೆ ತೆರಳಿದ್ದ ಮೇಘಾಲಯ ಮುಖ್ಯಮಂತ್ರಿ ಕೋನ್ರಡ್ ಸಂಗ್ಮಾ ಅವರ ಬೆಂಗಾವಲು ಪಡೆಯನ್ನು ಈ ವಾಹನ ಹಿಂಬಾಲಿಸುತ್ತಿತ್ತು ಎಂದು ಹೇಳಲಾಗಿದೆ.
ಜಪ್ತಿ ಮಾಡಿರುವ ವಾಹನವು ಸಿಎಂ ಬೆಂಗಾವಲು ಪಡೆಯ ಭಾಗವಾಗಿರಲಿಲ್ಲ. ಆದರೆ, ಬೈಕ್‌ವೊಂದನ್ನು ಹಿಂಬಾಲಿಸುತ್ತಿತ್ತು ಎಂದು ಲಾಂಗ್‌ಡಿಂಗ್ ಎಸ್‌ಪಿ ಡೆಕಿಯೊ ಗುಮ್ಜಾ ಹೇಳಿದ್ದಾರೆ.
ನಗದು ವಶಪಡಿಸಿಕೊಂಡ ಬಗ್ಗೆ ಆದಾಯ ತೆರಿಗೆ ಇಲಾಖೆಗೆ (ಐ.ಟಿ) ಮಾಹಿತಿ ನೀಡಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಗುಮ್ಜಾ ತಿಳಿಸಿದ್ದಾರೆ.