ಪತ್ತನಂತಿಟ್ಟ: ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ಮೇಷ ಮಾಸ ಪೂಜೆ ಮತ್ತು ವಿಷು ಪೂಜೆಗಳಿಗಾಗಿ ಏಪ್ರಿಲ್ 10 ರಂದು ಸಂಜೆ 5 ಗಂಟೆಗೆ ಗರ್ಭಗೃಹದ ಬಾಗಿಲು ತೆರೆಯಲಾಗುವುದು.
ಪ್ರಧಾನ ತಂತ್ರಿ ಮಹೇಶ್ ಮೋಹನ್ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಪಿ.ಎನ್. ಮಹೇಶ ನಂಬೂದಿರಿ ದೀಪ ಬೆಳಗಿಸುವರು. ನಂತರ ಉಪದೇವತೆಗಳಾದ ಗಣಪತಿ ಹಾಗೂ ನಾಗರ ದೇಗುಲಗಳ ಮೇಲ್ಶಾಂತಿಗಳು ಬಾಗಿಲು ತೆರೆದು ದೀಪಗಳನ್ನು ಬೆಳಗಿಸುವರು.
ಅಯ್ಯಪ್ಪ ಭಕ್ತರು 18 ನೇ ಮೆಟ್ಟಿಲು ಹತ್ತಿದ ನಂತರ 18 ನೇ ಮೆಟ್ಟಿಲಿನ ಮುಂದೆ ಯಾಗಕುಂಡದಲ್ಲಿ ತುಪ್ಪ ಸುರಿದು ಅಯ್ಯಪ್ಪ ದರ್ಶನ ಪಡೆಯಬಹುದು. ಮಾಳಿಗಪ್ಪುರಂ ಕ್ಷೇತ್ರದ ಮೇಲ್ಶಾಂತಿ ಮುರಳಿ ನಂಬೂದಿರಿ ಅವರು ಮಾ|ಳಿಗಪ್ಪುರ ದೇವಸ್ಥಾನದ ಬಾಗಿಲು ತೆರೆದು ಭಕ್ತರಿಗೆ ಅರಿಶಿನ ಪುಡಿ ಪ್ರಸಾದ ವಿತರಿಸುವರು.
ಆರಂಭದ ದಿನ ಎರಡೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದಿಲ್ಲ. 11ರಂದು ಬೆಳಗ್ಗೆ 5 ಗಂಟೆಗೆ ದೇವಸ್ಥಾನ ತೆರೆಯಲಾಗುವುದು. 11ರಿಂದ ತುಪ್ಪದ ಅಭಿಷೇಕ ನಡೆಯಲಿದೆ. ಏಪ್ರಿಲ್ 14, ಮೇಷ 1 ರಂದು ಮುಂಜಾನೆ 3 ಗಂಟೆಗೆ ಗರ್ಭಗೃಹದ ಬಾಗಿಲು ತೆರೆಯಲಾಗುವುದು. ನಂತರ ವಿಷುಕಣಿ ದರ್ಶನ ಮತ್ತು ಉಡುಗೊರೆಗಳ ಸಮರ್ಪಣೆ ನಡೆಯಲಿದೆ. ನಂತರ ನಿತ್ಯ ಅಭಿಷೇಕ, ತುಪ್ಪಾಭಿಷೇಕ, ಗಣಪತಿ ಹೋಮ ನಡೆಯಲಿದೆ. ಏಪ್ರಿಲ್ 18 ರಂದು ಪೂಜೆಗಳು ಮುಗಿದ ನಂತರ ಗರ್ಭಗೃಹ ಮುಚ್ಚಲಾಗುತ್ತದೆ.