ನವದೆಹಲಿ:ಗಂಗೂಬಾಯಿ ಕಾಠಿಯಾವಾಡಿ ನಟಿ ಆಲಿಯಾ ಭಟ್ ಅವರು ಟೈಮ್ ಮ್ಯಾಗಝಿನ್‌ನ 2024ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ನಟ ದೇವ್ ಪಟೇಲ್ ಮತ್ತು ಕುಸ್ತಿ ಚಾಂಪಿಯನ್ ಸಾಕ್ಷಿ ಮಲಿಕ್ ಅವರೂ ಪಟ್ಟಿಯಲ್ಲಿದ್ದಾರೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ,ಜಿಗರ್ ಶಾ,ಯೇಲ್ ವಿವಿಯಲ್ಲಿ ಖಗೋಳಶಾಸ್ತ್ರ ಮತ್ತು ಭೌತಶಾಸ್ತ್ರ ಪ್ರೊಫೆಸರ್ ಪ್ರಿಯಂವದಾ ನಟರಾಜನ್ ಮತ್ತು ಭಾರತೀಯ ಮೂಲದ ಹೋಟೆಲ್ ಉದ್ಯಮಿ ಆಸ್ಮಾ ಖಾನ್ ಅವರು ಪಟ್ಟಿಯಲ್ಲಿರುವ ಇತರ ಭಾರತೀಯರಲ್ಲಿ ಸೇರಿದ್ದಾರೆ.
ಹಾರ್ಟ್ ಆಫ್ ಸ್ಟೋನ್‌ನಲ್ಲಿ ಆಲಿಯಾರನ್ನು ನಿರ್ದೇಶಿಸಿದ್ದ ನಿರ್ಮಾಪಕ ಮತ್ತು ಸಾಹಿತಿ ಟಾಮ್ ಹಾರ್ಪರ್ ಅವರು ಆಲಿಯಾರನ್ನು 'ಅಸಾಧಾರಣ ಪ್ರತಿಭೆ' ಎಂದು ಬಣ್ಣಿಸಿದ್ದಾರೆ.
'ಮಂಕಿ ಮ್ಯಾನ್'ನಿರ್ದೇಶಕ ದೇವ್ ಪಟೇಲ್ ಬಗ್ಗೆ ನಟ ಡೇನಿಯಲ್ ಕಲುಯುಯಾ ಅವರು,ದೇವ್ ಪರದೆಯ ಮೇಲೆ ಕಾಣಿಸಿಕೊಂಡಾಗಲೆಲ್ಲ ಅವರ ಮಾನವೀಯತೆಯು ಹೊಳೆಯುತ್ತದೆ ಮತ್ತು ಅವರ ಪಾತ್ರವು ಕೆಟ್ಟದಾಗಿದ್ದರೂ ಸಹ ಕುರ್ಚಿಯಲ್ಲಿ ಬೇರೂರುವುದನ್ನು ಬಿಟ್ಟು ಬೇರೆ ಆಯ್ಕೆ ನಿಮಗಿರುವುದಿಲ್ಲ. ಮಂಕಿ ಮ್ಯಾನ್ ಅವರ ನಿರ್ದೇಶನದ ಮೊದಲ ಚಿತ್ರ ಎಂದು ನಂಬಲು ಸಾಧ್ಯವಿಲ್ಲ,ಅದನ್ನು ಅವರು ಅಷ್ಟು ಅದ್ಭುತವಾಗಿ ಮೂಡಿಸಿದ್ದಾರೆ ಎಂದು ಬರೆದಿದ್ದಾರೆ.
ಸಾಕ್ಷಿ ಮಲಿಕ್ ಕುರಿತಂತೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಿತ ಚಿತ್ರನಿರ್ಮಾಪಕಿ ನಿಶಾ ಪಹುಜಾ ಅವರು,'ಕುಸ್ತಿಪಟುಗಳ ಪರವಾಗಿ ಸರಕಾರದ ನಿರ್ಣಾಯಕ ಕ್ರಮಕ್ಕಾಗಿ ಒತ್ತಾಯಿಸಲು ಸಣ್ಣದಾಗಿ ಆರಂಭಗೊಂಡಿದ್ದ ಪ್ರತಿಭಟನೆಯು ಭಾರತೀಯ ಕ್ರಿಡಾಕ್ಷೇತ್ರದಲ್ಲಿ ಹಿಂದೆಂದೂ ಕಂಡಿರದಿದ್ದ ವರ್ಷ ಕಾಲದ ಹೋರಾಟವಾಗಿ ಬೆಳೆದಿತ್ತು. ದೇಶ ಮತ್ತು ವಿಶ್ವಾದ್ಯಂತದಿಂದ ಬೆಂಬಲವನ್ನು ಪಡೆದುಕೊಂಡಿತ್ತು' ಎಂದು ಬರೆದಿದ್ದಾರೆ.
ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಹಾಲಿವುಡ್ ಸೆಲೆಬ್ರಿಟಿಗಳಲ್ಲಿ ತರಾಜಿ ಪಿ.ಹೆನ್ಸನ್ ಮತ್ತು ಬಾರ್ಬಿ ಚಿತ್ರದಲ್ಲಿ ತನ್ನ ಇತ್ತೀಚಿನ ಪಾತ್ರದಿಂದಾಗಿ ಖ್ಯಾತರಾದ ಅಮೆರಿಕಾ ಫೆರೆರಾ ಸೇರಿದ್ದಾರೆ.
ಇತ್ತೀಚಿಗೆ ಜೈಲಿನಲ್ಲಿ ನಿಧನರಾದ ರಶ್ಯಾದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಅವರ ಪತ್ನಿ ಯೂಲಾ ನವಾಲ್ನಾಯಾ ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.