HEALTH TIPS

ಮೊದಲ ಹಂತದಲ್ಲಿ 102 ಸ್ಥಾನಗಳಿಗೆ ನಾಳೆ ಚುನಾವಣೆ: ಏನು ವಿಶೇಷ

 ವದೆಹಲಿ: ಲೋಕಸಭೆಯ ಮೊದಲ ಹಂತದ ಚುನಾವಣೆ ಇದೇ ಶುಕ್ರವಾರ ನಡೆಯಲಿದ್ದು, ಅಂದು 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಐದು ವರ್ಷಗಳ ಹಿಂದೆ ಈ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಸಾಧಿಸಿದ್ದ ‍ಪ್ರಾಬಲ್ಯ ಉಳಿಸಿಕೊಳ್ಳುವ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ಸವಾಲು ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ಮುಂದಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಈ 102 ಕ್ಷೇತ್ರಗಳ ಪೈಕಿ ಎನ್‌ಡಿಎ ಮಿತ್ರಕೂಟ 51 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ಬಿಜೆಪಿ ಗೆದ್ದುಕೊಂಡಿದ್ದು 40 ಸ್ಥಾನಗಳು. ವಿರೋಧ ಪಕ್ಷಗಳು ಕೂಡ ಇಷ್ಟೇ ಸ್ಥಾನಗಳನ್ನು ಗೆದ್ದರೂ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಕಾಂಗ್ರೆಸ್‌ ಜತೆ ಮೈತ್ರಿಮಾಡಿಕೊಂಡಿರಲಿಲ್ಲ.

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ತಲಾ ಒಂದು ಸ್ಥಾನ ಗೆದ್ದಿದ್ದ ಆರ್‌ಎಲ್‌ಪಿ ಮತ್ತು ಎಐಎಡಿಎಂಕೆ ಪಕ್ಷಗಳು ಈ ಬಾರಿ ಎನ್‌ಡಿಎ ಭಾಗವಾಗಿಲ್ಲ. ಆರ್‌ಎಲ್‌ಪಿ 'ಇಂಡಿಯಾ' ಮೈತ್ರಿಕೂಟದ ಜತೆಗೆ ಕೈಜೋಡಿಸಿದೆ. ಆರ್‌ಎಲ್‌ಪಿ ಮುಖ್ಯಸ್ಥ ಹನುಮಾನ್ ಬೇನಿವಾಲ್ ಅವರು ರಾಜಸ್ಥಾನದ ನಾಗೌರ್‌ನಿಂದ ಮರು ಆಯ್ಕೆ ಬಯಸಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಎಐಎಡಿಎಂಕೆ ಯಾರೊಂದಿಗೂ ಕೈಜೋಡಿಸದೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ.

40 ಸ್ಥಾನಗಳೊಂದಿಗೆ ಬಿಜೆಪಿಯು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಇದರ ಮಿತ್ರಪಕ್ಷಗಳಾದ ಎಲ್‌ಜೆಪಿ ಎರಡು ಮತ್ತು ಜೆಡಿಯು ಬಿಹಾರದಲ್ಲಿ ಒಂದು ಸ್ಥಾನ ಗೆದ್ದರೆ, ಶಿವಸೇನಾ ಮಹಾರಾಷ್ಟ್ರದಲ್ಲಿ ಒಂದು ಸ್ಥಾನ ಗೆದ್ದಿತ್ತು. ಈಶಾನ್ಯ ರಾಜ್ಯಗಳ ಪಕ್ಷಗಳಾದ ಎನ್‌ಪಿಎಫ್, ಎನ್‌ಪಿಪಿ, ಎನ್‌ಡಿಪಿಪಿ, ಎಂಎನ್‌ಎಫ್ ಮತ್ತು ಎಸ್‌ಕೆಎಂ ಕೂಡ ತಲಾ ಒಂದು ಸ್ಥಾನ ಗೆದ್ದಿದ್ದವು.

ವಿಪಕ್ಷಗಳ ಪೈಕಿ 24 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಡಿಎಂಕೆ ಪಾರಮ್ಯ ಮೆರೆದಿತ್ತು. ಕಾಂಗ್ರೆಸ್ 15, ಸಿಪಿಎಂ ಮತ್ತು ಸಿಪಿಐ ತಲಾ ಎರಡು ಸ್ಥಾನ, ವಿಸಿಕೆ, ಮುಸ್ಲಿಂ ಲೀಗ್ ಮತ್ತು ಎನ್‌ಸಿಪಿ ತಲಾ ಒಂದು ಸ್ಥಾನ ಗೆದ್ದಿದ್ದವು. ಉತ್ತರಪ್ರದೇಶದಲ್ಲಿ ವಿಪಕ್ಷಗಳ ಮೈತ್ರಿಕೂಟದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಎರಡು ಸ್ಥಾನಗಳನ್ನು ಜಯಿಸಿದ್ದವು.

ಈ ಬಾರಿಯ ಮೊದಲ ಹಂತದ ಮತದಾನದಲ್ಲಿ, ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮಿತ್ರಕೂಟದ ಹಾದಿಗೆ ಎಐಎಡಿಎಂಕೆ ಮತ್ತು ಬಿಜೆಪಿಯಿಂದ ಯಾವುದೇ ಸವಾಲು ಎದುರಾಗದಿದ್ದರೆ ಕಳೆ‌ದ ಬಾರಿಯಂತೆಯೇ 38-1 ಫಲಿತಾಂಶ ಮರಕಳಿಸುತ್ತದೆ ಎನ್ನುವ ವಿಶ್ವಾಸದಲ್ಲಿ 'ಇಂಡಿಯಾ' ಮೈತ್ರಿಕೂಟವಿದೆ.

ಅದೇ ರೀತಿ, 2014 ಮತ್ತು 2019ರಲ್ಲಿ ರಾಜಸ್ಥಾನದಲ್ಲಿ ಸಂಪೂರ್ಣ ಸೋತಿರುವ ಕಾಂಗ್ರೆಸ್ ಈ ಬಾರಿ ರಾಜಸ್ಥಾನದಲ್ಲಿ ತನ್ನ ಖಾತೆ ತೆರೆಯುವ ನಿರೀಕ್ಷೆ ಹೊಂದಿದೆ. ರಾಜಸ್ಥಾನದಲ್ಲಿ ಈಗ ನಡೆಯಲಿರುವ ಚುನಾವಣೆಯ 12 ಸ್ಥಾನಗಳಲ್ಲಿ, ಬಿಜೆಪಿ ಕಳೆದ ಸಲ 11 ಸ್ಥಾನಗಳಲ್ಲಿ ಗೆದ್ದಿದ್ದರೆ, ಉಳಿದ ಒಂದು ಸ್ಥಾನವನ್ನು ಆರ್‌ಎಲ್‌ಪಿ ಗೆದ್ದುಕೊಂಡಿತ್ತು.

ನಾಗೌರ್‌ನಿಂದ ಮರು ಆಯ್ಕೆ ಬಯಸುತ್ತಿರುವ ಹಿಂದಿನ ಎನ್‌ಡಿಎ ಮಿತ್ರ ಬೇನಿವಾಲ್ ಈಗ ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟದಲ್ಲಿದ್ದಾರೆ. ಇದರಲ್ಲಿ ಸಿಪಿಎಂ ಸಹ ಇದ್ದು, ಈ ಪಕ್ಷದ ಅಮ್ರ ರಾಮ್ ಸಿಕರ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಟಿಕೆಟ್‌ ನಿರಾಕರಿಸಿದ ನಂತರ ಬಿಜೆಪಿ ತೊರೆದಿರುವ ಹಾಲಿ ಸಂಸದ ರಾಹುಲ್ ಕಸ್ವಾನ್ ಅವರು ಕಾಂಗ್ರೆಸ್‌ ಟಿಕೆಟ್‌ ಮೇಲೆ ಚುರು ಕ್ಷೇತ್ರದಿಂದ ಕಣದಲ್ಲಿದ್ದಾರೆ.

ಉತ್ತರಪ್ರದೇಶದಲ್ಲಿ 8 ಸ್ಥಾನಗಳಲ್ಲಿ, ಬಿಜೆಪಿ ಮತ್ತು ಬಿಎಸ್‌ಪಿ ತಲಾ ಮೂರು ಸ್ಥಾನಗಳನ್ನು ಮತ್ತು ಎಸ್‌ಪಿ ಒಂದರಲ್ಲಿ ಗೆದ್ದಿದ್ದವು. ಆದರೆ ನಂತರ ರಾಂಪುರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯು ಎಸ್‌ಪಿ ಅಭ್ಯರ್ಥಿಯನ್ನು ಸೋಲಿಸಿತು. ಇಂಡಿಯಾ ಮೈತ್ರಿಕೂಟ ಸಹಾರನ್‌ಪುರ ಮತ್ತು ಕೈರಾನಾ ಮತ್ತು ಪಿಲಿಭಿತ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಅಲ್ಲಿ ಬಿಜೆಪಿ ವರುಣ್ ಗಾಂಧಿಗೆ ಟಿಕೆಟ್ ನಿರಾಕರಿಸಿದೆ. ಆದರೆ ಬಿಎಸ್‌ಪಿಯ ತಂತ್ರಗಾರಿಕೆಯ ಅಭ್ಯರ್ಥಿಗಳು ಎರಡೂ ಕಡೆಯ ಅಭ್ಯರ್ಥಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ ಎಂಬುದನ್ನು ಕಾದುನೋಡಬೇಕು.

ಉತ್ತರಾಖಂಡ (5) ಮತ್ತು ಪಶ್ಚಿಮ ಬಂಗಾಳದಲ್ಲಿ (3) ಚುನಾವಣೆ ನಡೆಯಲಿರುವ ಎಲ್ಲ ಎಂಟು ಸ್ಥಾನಗಳನ್ನು ಬಿಜೆಪಿಯು ಗೆದ್ದಿತ್ತು. ಮೊದಲ ಹಂತದಲ್ಲಿ ಐದು ಸ್ಥಾನಗಳಿಗೆ (ಬಿಜೆಪಿ-3, ಕಾಂಗ್ರೆಸ್-1, ಶಿವಸೇನೆ-1) ಚುನಾವಣೆ ನಡೆಯಲಿರುವ ಮತ್ತೊಂದು ರಾಜ್ಯ ಮಹಾರಾಷ್ಟ್ರದತ್ತಲೂ ಎರಡೂ ಕೂಟಗಳು ತೀವ್ರ ಗಮನ ಹರಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries