ಬಿಹಾರ: ಕಳೆದ 10 ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮಾಡಿರೋದು ಕೇವಲ 'ಟ್ರೇಲರ್' ಅಷ್ಟೇ, ಮೂರನೇ ಅವಧಿಗೆ ತಾವೂ ಪ್ರಧಾನಿ ಪ್ರಧಾನಿಯಾದರೆ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಮುಯಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಬಿಜೆಪಿ ಮತ್ತು ಎನ್‌ಡಿಎ ಪರ ಅಲೆ ಬಿಹಾರ ಮಾತ್ರವಲ್ಲದೇ, ದೇಶದ ಮೂಲೆ ಮೂಲೆಗಳಲ್ಲಿಯೂ ಸದ್ದು ಮಾಡುತ್ತಿವೆ. ಕಳೆದ 10 ವರ್ಷಗಳಲ್ಲಿ ಏನಾಯಿತು ಎಂಬುದು ಕೇವಲ ಟ್ರೇಲರ್, ಇನ್ನೂ ಸಾಕಷ್ಟು ಮಾಡಬೇಕಾಗಿದೆ. ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ನಾವೆಲ್ಲರೂ ಒಗ್ಗೂಡಬೇಕಾಗಿದೆ ಎಂದರು.
ಕೇಂದ್ರದಲ್ಲಿ 'ಘಮಾಂಡಿಯಾ' ಮೈತ್ರಿಕೂಟದ ಪಾಲುದಾರರು ಅಧಿಕಾರದಲ್ಲಿದ್ದ ದಿನದಲ್ಲಿ, ರೈಲುಗಳು ಅತ್ಯಂತ ಕೆಟ್ಟದಾಗಿದ್ದವು. ಈಗ, ಬಿಹಾರದ ಜನರು ವಂದೇ ಭಾರತ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ರೈಲ್ವೆಯಲ್ಲಿ ಬಡವರಿಗೆ ಉದ್ಯೋಗ ನೀಡುವ ಹೆಸರಿನಲ್ಲಿ ಭೂಮಿ ಕಬಳಿಸಿದವರು ಬಿಹಾರದ ಜನರಿಗೆ ಎಂದಿಗೂ ಒಳ್ಳೆಯದನ್ನು ಮಾಡಲಿಲ್ಲ ಎಂದು ಇಂಡಿಯಾ ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತವನ್ನು ವಿಶ್ವದ ದೃಷ್ಟಿಯಲ್ಲಿ 'ದುರ್ಬಲ' ಎಂದು ಪರಿಗಣಿಸಲಾಗಿತ್ತು. ಆದರೆ ಈಗ ದೇಶವು ಜಾಗತಿಕ ನಾಯಕ ಎಂದು ಕರೆಸಿಕೊಳ್ಳುತ್ತಿದೆ. ಇಡೀ ಜಗತ್ತು ನಮ್ಮನ್ನು ಗಮನಿಸುತ್ತಿದೆ. ಜಾಗತಿಕವಾಗಿ ದೇಶದ ಪ್ರತಿಷ್ಠೆ ಹೆಚ್ಚಿದ್ದು, ನಾವು ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿದ್ದೇವೆ. ವಿಕಸಿತ ಭಾರತ ಗುರಿಯತ್ತ ಬಿಜೆಪಿ ಹಾಗೂ ಎನ್ ಡಿಎ ಕಾರ್ಯೋನ್ಮುಖವಾಗಿರುವುದಾಗಿ ಅವರು ತಿಳಿಸಿದರು.