ಭೋಪಾಲ್: ಮಧ್ಯಪ್ರದೇಶದಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 1.26 ಲಕ್ಷ ಮಂದಿ ಬಿಜೆಪಿ ಸೇರಿದ್ದಾರೆ. ಹಾಗೆಯೇ, ಕಳೆದ ಮೂರು ತಿಂಗಳಲ್ಲಿ ಸುಮಾರು 2.58 ಲಕ್ಷ ಜನರು ಕೇಸರಿ ಪಕ್ಷವನ್ನು ಕೂಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನವರು ಕಾಂಗ್ರೆಸ್‌ನಿಂದ ಬಂದವರಾಗಿದ್ದಾರೆ ಎಂದು ಬಿಜೆಪಿ ನಾಯಕ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
'ಕಾಂಗ್ರೆಸ್, ಸಾಮಾಜಿಕ ಸಂಘಟನೆಗಳ ಸದಸ್ಯರು ಹಾಗೂ ಇತರರು ಸೇರಿದಂತೆ ಸುಮಾರು 1.26 ಲಕ್ಷಕ್ಕೂ ಅಧಿಕ ಮಂದಿ ಬಿಜೆಪಿ ಸೇರಿದ್ದಾರೆ' ಎಂದು ಅವರು ಶನಿವಾರ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು, ಏಪ್ರಿಲ್ 6ರಂದು ಪಕ್ಷದ ಸ್ಥಾಪನಾ ದಿನವನ್ನಾಚರಿಸಿದ್ದಾರೆ.
ಮಧ್ಯಪ್ರದೇಶದ ಮಾಜಿ ಸಚಿವರೂ ಆಗಿರುವ ಮಿಶ್ರಾ, 'ಬಿಜೆಪಿ ಸೇರಿರುವವರಲ್ಲಿ ಶೇ 90ರಷ್ಟು ಮಂದಿ ಕಾಂಗ್ರೆಸ್‌ನವರು. ಉಳಿದವರು ಸಾಮಾಜಿಕ ಸಂಘಟನೆಗಳು, ನಿವೃತ್ತ ಅಧಿಕಾರಿಗಳು ಹಾಗೂ ಬೇರೆ ಬೇರೆ ವರ್ಗಗಳಿಗೆ ಸೇರಿದವರಾಗಿದ್ದಾರೆ' ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ, ನಾಯಕತ್ವ, ಅವರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ರಾಷ್ಟ್ರೀಯವಾದಿ ಸಿದ್ಧಾಂತದಿಂದ ಪ್ರಭಾವಿತರಾಗಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ ಎಂದೂ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.
ಉಜ್ಜಯಿನಿ ಜಿಲ್ಲೆಯ ಘತಿಯಾ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್‌ನಿಂದ ಮೂರು ಆಯ್ಕೆಯಾಗಿದ್ದ ರಾಮಲಾಲ್ ಮಾಳವೀಯ ಅವರು ತಮ್ಮ ಬೆಂಬಲಿಗರೊಂದಿಗೆ ಇದೇ ದಿನ ಕೇಸರಿ ಪಕ್ಷ ಸೇರಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮಾ ಉಪಸ್ಥಿತರಿದ್ದರು.