ಲಂಡನ್ : ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಅಡಿಯಲ್ಲಿ ಬ್ರಿಟನ್ನಿನ ವಲಸೆ ಅಧಿಕಾರಿಗಳು 12 ಮಂದಿಯನ್ನು ಬಂಧಿಸಿದ್ದಾರೆ. ಇವರೆಲ್ಲರೂ ಭಾರತೀಯ ಪ್ರಜೆಗಳು ಎನ್ನಲಾಗಿದೆ.
ವೀಸಾ ಷರತ್ತು ಉಲ್ಲಂಘಿಸಿ, ಬೆಡ್ ಮತ್ತು ಕೇಕ್ ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಅನುಮಾನದ ಅಡಿಯಲ್ಲಿ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿದ್ದರು.
ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲೆಂಡ್ಸ್ ಪ್ರದೇಶದಲ್ಲಿ ಅಕ್ರಮವಾಗಿ ಕೆಲಸ ನಡೆಯುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ನೀಡಿದ್ದ ಮಾಹಿತಿ ಆಧರಿಸಿ ವಲಸೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲಿ ಏಳು ಮಂದಿ ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಬ್ರಿಟನ್ನಿನ ಗೃಹ ಸಚಿವಾಲಯ ಹೇಳಿದೆ.
ಅಲ್ಲಿಗೆ ಸನಿಹದ ಕೇಕ್ ತಯಾರಿಕಾ ಘಟಕದಲ್ಲಿ ನಾಲ್ಕು ಮಂದಿ ಭಾರತೀಯರನ್ನು ಬಂಧಿಸಲಾಗಿದೆ. ವಲಸೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯ ಕಾರಣಕ್ಕೆ ಭಾರತೀಯ ಮಹಿಳೆಯೊಬ್ಬರನ್ನು ಮನೆಯೊಂದರಲ್ಲಿ ಬಂಧಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಬಂಧಿತರಲ್ಲಿ ನಾಲ್ಕು ಮಂದಿಯನ್ನು ಬ್ರಿಟನ್ನಿನಿಂದ ಹೊರಹಾಕುವ ಅಥವಾ ಭಾರತಕ್ಕೆ ರವಾನಿಸುವ ಸಾಧ್ಯತೆ ಇದೆ. ಇನ್ನು ಎಂಟು ಮಂದಿಗೆ ಕಾಲಕಾಲಕ್ಕೆ ಗೃಹ ಸಚಿವಾಲಯಕ್ಕೆ ಬಂದು ಸಹಿ ಹಾಕುವಂತೆ ಸೂಚಿಸಲಾಗಿದೆ.
ಇವರೆಲ್ಲ ಕೆಲಸ ಮಾಡುತ್ತಿದ್ದ ಎರಡು ಘಟಕಗಳು ಅಕ್ರಮವಾಗಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದು ಅಥವಾ ಕೆಲಸಕ್ಕೆ ನೇಮಿಸಿಕೊಳ್ಳುವ ಮೊದಲು ಅವರ ಪೂರ್ವಾಪರ ಪರಿಶೀಲಿಸಲು ವಿಫಲವಾಗಿದ್ದು ಸಾಬೀತಾದರೆ ಅವುಗಳಿಗೆ ದಂಡ ವಿಧಿಸುವ ಸಾಧ್ಯತೆ ಇದೆ.
'ಜನರನ್ನು ಕಳ್ಳಸಾಗಣೆ ಮಾಡುವವರು, ಬ್ರಿಟನ್ನಿನಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ ಎಂದು ಸುಳ್ಳು ಹೇಳಿರುತ್ತಾರೆ. ಆದರೆ ವಾಸ್ತವ ಏನೆಂದರೆ, ಅವರಿಗೆ ಕೆಲಸ ಮಾಡಲು ಅವಕಾಶ ಇರುವುದಿಲ್ಲ. ಅಕ್ರಮವಾಗಿ ಕೆಲಸ ಮಾಡುತ್ತಿರುವವರು ಹಾಗೂ ಅಕ್ರಮವಾಗಿ ಕೆಲಸ ಮಾಡುವುದಕ್ಕೆ ನೆರವಾಗುವವರು ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ' ಎಂದು ವಲಸೆ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.