ರಾಯಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ ಮತ್ತೆ ಮೂವರು ನಕ್ಸಲರ ಮೃತದೇಹಗಳು ದೊರೆತಿದ್ದು ಎನ್‌ಕೌಂಟರ್‌ನಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಮಂಗಳವಾರ ಭದ್ರತಾ ಸಿಬ್ಬಂದಿ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ 10 ನಕ್ಸಲರು ಮೃತಪಟ್ಟಿದ್ದರು.
ಜಿಲ್ಲೆಯ ಲೆಂದ್ರಾ ಬಳಿಯ ಅರಣ್ಯದಲ್ಲಿ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ, ಸುದೀರ್ಘಾವಧಿ ಗುಂಡಿನ ಚಕಮಕಿ ನಡೆದಿತ್ತು.
ಗುಂಡಿನ ಚಕಮಕಿಯ ಬಳಿಕ ಮೊದಲಿಗೆ ನಾಲ್ವರು ನಕ್ಸಲರ ಶವಗಳು ಕಂಡುಬಂದವು. ಶೋಧ ಮುಂದುವರಿಸಿದಾಗ ಮತ್ತೆ ಆರು ನಕ್ಸಲರ ಶವಗಳು ಪತ್ತೆಯಾದವು, ಇಂದು ಮೂರು ಮೃತದೇಹಗಳು ಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಷಿನ್ ಗನ್, ಪಾಯಿಂಟ್ 303 ರೈಫಲ್, 12 ಬೋರ್ ಗನ್, ಗ್ರನೇಡ್ ಲಾಂಚರ್ ಮತ್ತು ಶೆಲ್‌ಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ಚಕಮಕಿ ನಡೆದ ಸ್ಥಳದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ನಕ್ಸಲರ ಗುರುತು ಪತ್ತೆಯಾಗಿಲ್ಲ. ಇವರು, ಮಾವೋವಾದಿಗಳ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಪಡೆಯ ಸದಸ್ಯರು ಎಂದು ಮೇಲ್ಕೋಟಕ್ಕೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಅದರ ಕೋಬ್ರಾ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಶೋಧ ಕಾರ್ಯ ಮುಂದುವರಿದಿದೆ.