ತಿರುವನಂತಪುರಂ: ಟೆಕ್ನಾಲಜಿ ಬೆಳೆದಂತೆ ದೇಶದಲ್ಲಿ ಹಲವು ರೀತಿಯ ಸೈಬರ್ ವಂಚನೆ ಗ್ಯಾಂಗ್‌ಗಳು ಸಕ್ರಿಯವಾಗುತ್ತಿವೆ. ವಂಚನೆ ಸಂಬಂಧಿಸಿದ ಒಂದಿಲ್ಲೊಂದು ಸುದ್ದಿ ದಿನನಿತ್ಯ ಹೊರಬರುತ್ತಲೇ ಇದೆ. ಇದೀಗ ಮುಂಬೈನಲ್ಲಿ ವಾಸವಿರುವ ಕೇರಳ ಮೂಲದವರು ಈ ವಿಭಿನ್ನ ಮೋಸದ ಜಾಲವನ್ನು ಬಯಲಿಗೆ ತಂದಿದ್ದಾರೆ.
ಉಷಾ ಎಂಬುವರು ಮುಂಬೈನಲ್ಲಿ ವಾಸವಿದ್ದಾರೆ. 13 ವರ್ಷಗಳ ಹಿಂದೆಯೇ ಅವರ ಮಗ ಮೃತಪಟ್ಟಿದ್ದಾರೆ. ಆದರೆ, ಮಗನ ಹೆಸರಿನಲ್ಲಿ ಫೋನ್ ಮಾಡಿದ ವಂಚಕರು, ನಿಮ್ಮ ಮಗನ ಕಾರು ಡಿಕ್ಕಿಯಾಗಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಮಗನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಸಿದ್ದಾರೆ. ಆದರೆ, ಫೋನ್ ಕಾಲ್ ಹಿಂದಿರುವ ಕುತಂತ್ರ ಉಷಾ ಅವರಿಗೆ ತಕ್ಷಣ ಅರ್ಥವಾಯಿತು.
ವಂಚಕರಿಗೆ ಉಷಾ ಮಗ ಸತ್ತಿರುವುದು ಗೊತ್ತಿರಲಿಲ್ಲ. ಉಷಾ ಅವರ ಮಗ ಕ್ಯಾನ್ಸರ್ ಗಡ್ಡೆಯಿಂದ ಕೊನೆಯುಸಿರೆಳೆದಿದ್ದಾನೆ. ಫೋನ್ ಕರೆ ಮಾಡಿದವರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಈ ವೇಳೆ ಈ ಪ್ರಕರಣವನ್ನು ಸಮೀಪದ ವಾಶಿ ಪೊಲೀಸ್ ಠಾಣೆಗೆ ವರ್ಗಾಯಿಸುವಂತೆ ಉಷಾ ಕೇಳಿದ್ದಾರೆ. ಯಾವಾಗ ಉಷಾ ಕೇಳಿದರೂ ತಕ್ಷಣ ವಂಚಕರು ಕರೆ ಕಟ್ ಮಾಡಿದ್ದಾರೆ. ಹೀಗಂತ ಉಷಾ ಅವರೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಮುಂಬೈನಲ್ಲಿ ನೆಲೆಸಿರುವ ಮಲಯಾಳಿ ಸುಧೀಶ್ ಅವರಿಗೂ ಇದೇ ರೀತಿಯ ದೂರವಾಣಿ ಕರೆ ಬಂದಿದೆ. ಬೆಳಗ್ಗೆ ಅಂಗಡಿಯನ್ನು ತೆರೆಯಲು ಬಂದಾಗ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಮಗನ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಣ ಕೊಟ್ಟರೆ ಪ್ರಕರಣ ರದ್ದು ಮಾಡುವುದಾಗಿ ಒತ್ತಾಯಿಸಿದ್ದಾರೆ. ವಂಚಕರು ಮರಾಠಿ ಮಿಶ್ರಿತ ಹಿಂದಿಯಲ್ಲಿ ಮಾತನಾಡಿದ್ದಾರೆ. ಆದರೆ, ಕೆಲವೇ ನಿಮಿಷಗಳ ಹಿಂದೆ ಮನೆಯಲ್ಲಿದ್ದ ಮಗನ ವಿರುದ್ಧ ಪ್ರಕರಣ ದಾಖಲಿಸಿರುವುದು ಗೊತ್ತಾಗುತ್ತಿದ್ದಂತೆ ವಂಚನೆ ಗ್ಯಾಂಗ್ ಬಲೆ ಬೀಸಿರುವುದು ಸುಧೀಶ್‌ಗೂ ಅರ್ಥವಾಗಿತ್ತು.
ಇದಾದ ಬಳಿಕ ಸುಧೀಶ್, ಠಾಣೆಗೆ ಬಂದು ದೂರು ನೀಡಿದ್ದಾರೆ. ಕೇರಳ ಮೂಲದವರೇ ಇಂತಹ ದೂರುಗಳೊಂದಿಗೆ ಹೆಚ್ಚಾಗಿ ಠಾಣೆಗೆ ಬರುತ್ತಿರುವುದಾಗಿ ಪೊಲೀಸ್ ಠಾಣೆಯಿಂದ ತಿಳಿದುಕೊಂಡೆ ಎನ್ನುತ್ತಾರೆ ಸುಧೀಶ್. ಕಳೆದ ಒಂದು ತಿಂಗಳಿನಲ್ಲಿ ಮುಂಬೈನಲ್ಲಿ ಅನೇಕ ಮಲಯಾಳಿಗಳಿಗೆ ಸೈಬರ್ ವಂಚಕರ ಜಾಲದಿಂದ ಫೋನ್ ಕರೆಗಳು ಬಂದಿವೆ.
ಕುಟುಂಬದ ಪ್ರೀತಿಪಾತ್ರರಿಂದ ಮಾಹಿತಿಯನ್ನು ಸಂಗ್ರಹಿಸಿ ಮಕ್ಕಳ ಹೆಸರಿನಲ್ಲಿ ಬೆದರಿಸುವುದು ಮೋಸದ ವಿಧಾನಗಳಾಗಿವೆ. ಪ್ರಕರಣ ದಾಖಲಾದರೂ ಪೊಲೀಸರು ತನಿಖೆ ನಡೆಸಿದಾಗ ವಿದೇಶದಿಂದ ಬಂದ ಐಡಿಗಳು ಸಿಗುತ್ತವೆ. ಹೀಗಾಗಿ ವಂಚಕರನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ. ಸೈಬರ್ ವಂಚನೆ ಬಗ್ಗೆ ಜನ ಜಾಗೃತಿ ಮೂಡಿಸುವುದೇ ಸದ್ಯಕ್ಕೆ ನಮ್ಮ ಮುಂದಿರುವ ಪರಿಹಾರ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.