ಇಂದೋರ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಸಂಜಯ್ ಶುಕ್ಲಾ ಮತ್ತು ಇತರ ಮೂವರಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇಂದೋರ್ ಜಿಲ್ಲಾಡಳಿತ ₹140.60 ಕೋಟಿ ದಂಡ ವಿಧಿಸಲು ಸೂಚಿಸಿ, ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಇಂದೋರ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಸಂಜಯ್ ಶುಕ್ಲಾ ಮತ್ತು ಇತರ ಮೂವರಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇಂದೋರ್ ಜಿಲ್ಲಾಡಳಿತ ₹140.60 ಕೋಟಿ ದಂಡ ವಿಧಿಸಲು ಸೂಚಿಸಿ, ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ಗೆ ಹೊಂದಿಕೊಂಡಿರುವ ಬರೋಲಿ ಗ್ರಾಮದ ಎರಡು ಸ್ಥಳಗಳಲ್ಲಿ 5.50 ಹೆಕ್ಟೇರ್ ಮತ್ತು 3.40 ಹೆಕ್ಟೇರ್‌ನಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದನ್ನು ಗಣಿಗಾರಿಕೆ ಇಲಾಖೆ ಪತ್ತೆಹಚ್ಚಿದೆ.
ಈ ಎರಡೂ ಕಡೆ ನಡೆದಿರುವ ಮುರುಮ್ ಮತ್ತು ಕಲ್ಲು ಅಕ್ರಮ ಗಣಿಗಾರಿಕೆ ಸಂಬಂಧ ಶುಕ್ಲಾ ಮತ್ತು ಅವರ ಸಹೋದರ ರಾಜೇಂದ್ರ ಶುಕ್ಲಾ ಹಾಗೂ ಬರೋಲಿ ಗ್ರಾಮದ ಮೆಹರ್ಬನ್ ಸಿಂಗ್ ರಜಪೂತ್ ಅವರಿಗೆ ಇದೇ 19ರಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಹಾಜರಾಗದಿದ್ದರೆ ಏಕಪಕ್ಷೀಯವಾಗಿ ಕ್ರಮ ತೆಗೆದುಕೊಳ್ಳುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಬರೋಲಿ ಗ್ರಾಮದ ಎರಡು ಸ್ಥಳಗಳಲ್ಲಿ ಸುಮಾರು 4 ಲಕ್ಷ ಕ್ಯುಬಿಕ್ ಮೀಟರ್ 'ಮರುಮ್' (ಮಣ್ಣು ಹಾಗೂ ಕಲ್ಲು ಬೆರೆತಿರುವುದು) ಮತ್ತು 2.23 ಲಕ್ಷ ಕ್ಯೂಬಿಕ್ ಮೀಟರ್ ಕಲ್ಲುಗಳನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಲಾಗಿದ್ದು, ಶುಕ್ಲಾ ಮತ್ತು ಇತರ ಮೂವರಿಗೆ ಮಧ್ಯಪ್ರದೇಶ ಖನಿಜಗಳ (ಅಕ್ರಮ ಗಣಿಗಾರಿಕೆ, ಸಾಗಣೆ ಮತ್ತು ಸಂಗ್ರಹಣೆ ತಡೆಗಟ್ಟುವಿಕೆ) ನಿಯಮಗಳು- 2022ರ ಅಡಿಯಲ್ಲಿ ₹140.60 ಕೋಟಿ ದಂಡ ವಿಧಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಈವರೆಗೆ ನನಗೆ ಯಾವುದೇ ನೋಟಿಸ್ (ಅಕ್ರಮ ಗಣಿಗಾರಿಕೆ ಕುರಿತು) ಬಂದಿಲ್ಲ. ನೋಟಿಸ್ ಬಂದ ನಂತರವೇ ಈ ಬಗ್ಗೆ ನಾನು ಏನನ್ನಾದರೂ ಹೇಳಲು ಸಾಧ್ಯ' ಎಂದು ಸಂಜಯ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಶಾಸಕರಾಗಿದ್ದ ಸಂಜಯ್ ಅವರು 2023ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಇಂದೋರ್-1 ಕ್ಷೇತ್ರದಿಂದ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಅವರ ಎದುರು ಪರಾಭವಗೊಂಡಿದ್ದರು. ಚುನಾವಣಾ ಸೋಲಿನ ಮೂರು ತಿಂಗಳ ನಂತರ ಮಾರ್ಚ್ 9ರಂದು ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದಾರೆ.