ಬಠಿಂಡಾ: ಕೃತಕ ಕಾಲಿನೊಂದಿಗೆ 14,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡುವ ಮೂಲಕ ಲೆಫ್ಟಿನೆಂಟ್ ಕರ್ನಲ್ ಅವನೀಶ್ ಬಾಜಪೇಯಿ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಿಬ್ಬೆರಗಾಗಿಸಿದ್ದಾರೆ. ಭಾರತೀಯ ಸೇನಾ ಪಡೆಯ ಹೆಚ್ಚುವರಿ ಸಾರ್ವಜನಿಕ ಮಾಹಿತಿ ಪ್ರಧಾನ ನಿರ್ದೇಶನಾಲಯದ ಅಧಿಕೃತ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅವರ ಸ್ಕೈಡೈವಿಂಗ್ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.
ಈ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಸಂಖ್ಯಾತ ಪ್ರತಿಕ್ರಿಯೆ ಬಂದಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಹೆಚ್ಚುವರಿ ಸಾರ್ವಜನಿಕ ಮಾಹಿತಿ ಪ್ರಧಾನ ನಿರ್ದೇಶನಾಲಯವು, "ಧೀರ ಯೋಧ ಹಾಗೂ ಕಾರ್ಯಾಚರಣೆಯಲ್ಲಿ ತಮ್ಮ ಕಾಲನ್ನು ಕಳೆದುಕೊಂಡಿರುವ ಲೆಫ್ಟಿನೆಂಟ್ ಕರ್ನಲ್ ಅವನೀಶ್ ಬಾಜಪೇಯಿ ಭಾರಿ ಸವಾಲನ್ನು ಸ್ವೀಕರಿಸಿದ್ದಾರೆ. ಅವರು ಕೃತಕ ಕಾಲಿನೊಂದಿಗೆ 14,000 ಅಡಿ ಎತ್ತರದ ಆಗಸದಿಂದ ಕೆಳಕ್ಕೆ ಜಿಗಿದಿದ್ದಾರೆ. ಬಠಿಂಡಾ ವಾಯು ನೆಲೆಯಲ್ಲಿನ ಈ ಅದ್ಭುತ ಸಾಧನೆಯು ಮನುಷ್ಯನ ಇಚ್ಛಾಶಕ್ತಿ, ಸ್ಥಿತಿ ಸ್ಥಾಪಕತ್ವ ಹಾಗೂ ದೃಢ ನಿರ್ಧಾರದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ" ಎಂದು ತನ್ನ ಪೋಸ್ಟ್ ನಲ್ಲಿ ಹೇಳಿದೆ.
ಇದರೊಂದಿಗೆ ಲೆಫ್ಟಿನೆಂಟ್ ಕರ್ನಲ್ ಅವನೀಶ್ ಬಾಜಪೇಯಿ ಅವರ ಫೋಟೊಗಳನ್ನೂ ಅವರು ಹಂಚಿಕೊಂಡಿದ್ದಾರೆ. ಈ ಫೋಟೊಗಳ ಪೈಕಿ ಒಂದು ಫೋಟೊದಲ್ಲಿ ಅವರು ಹೆಲಿಕಾಪ್ಟರ್ ನಲ್ಲಿರುವುದನ್ನು ತೋರಿಸುತ್ತಿದ್ದರೆ, ಮತ್ತೊಂದು ಫೋಟೊವು, ಆ ಹೆಲಿಕಾಪ್ಟರ್ ಎದುರು ಅವರು ಜನರ ಗುಂಪಿನೊಂದಿಗೆ ನಿಂತಿರುವುದನ್ನು ತೋರಿಸುತ್ತಿದೆ. ಸುದ್ದಿ ಸಂಸ್ಥೆ ANI ತನ್ನ ಎಕ್ಸ್ ಖಾತೆಯಲ್ಲಿ ಅವನೀಶ್ ಬಾಜಪೇಯಿ ಅವರ ಸ್ಕೈಡೈವಿಂಗ್ ವೀಡಿಯೊ ಹಂಚಿಕೊಂಡಿದೆ.