ಕೋಝಿಕ್ಕೋಡ್: ಸರ್ಕಾರಿ ಆಸ್ಪತ್ರೆಗಳಿಗೆ ಶಸ್ತ್ರಚಿಕಿತ್ಸಾ ಉಪಕರಣಗಳ ಪೂರೈಕೆಗಾಗಿ ಪೂರೈಕೆದಾರರಿಗೆ ಸರ್ಕಾರವು ಪಾವತಿಸಲು 143 ಕೋಟಿ ಬಾಕಿ ಇದೆ.
ಎರಡು ವರ್ಷಗಳಿಂದ ಪಾವತಿಯಾಗದ ಹಿನ್ನೆಲೆಯಲ್ಲಿ ಕಂಪನಿಗಳು ಏಪ್ರಿಲ್ 1 ರಿಂದ ಶಸ್ತ್ರಚಿಕಿತ್ಸಾ ಉಪಕರಣಗಳ ಪೂರೈಕೆಯನ್ನು ನಿಲ್ಲಿಸಿವೆ. ಇದರಿಂದಾಗಿ ರಾಜ್ಯದ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗಳು ಸ್ಥಗಿತಗೊಂಡಿವೆ. ಹೃದಯ ಶಸ್ತ್ರ ಚಿಕಿತ್ಸೆ ಉಪಕರಣಗಳಾದ ಕಾರ್ಡಿಯಾಕ್ ಸ್ಟೆಂಟ್, ಪೇಸ್ ಮೇಕರ್, ಗೈಡ್ ವೈರ್, ಬಲೂನ್, ಕ್ಯಾತಿಟರ್ ವೈರ್, ವಾಲ್ವ್ ಇತ್ಯಾದಿಗಳ ಪೂರೈಕೆಯನ್ನು ನಿಲ್ಲಿಸಲಾಗಿದೆ.
ತಿರುವನಂತಪುರಂ ಮೆಡಿಕಲ್ ಕಾಲೇಜು ಅತ್ಯಂತ ಹೆಚ್ಚು ಸಂಕಷ್ಟಕ್ಕೊಳಗಾಗಿದೆ. ಕಾಲೇಜಿನಲ್ಲಿ 49 ಕೋಟಿಗಳಷ್ಟು ಬಾಕಿಯಿದೆ. ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ- 23 ಕೋಟಿ, ಕೊಟ್ಟಾಯಂ ಮೆ. ಕಾಲೇಜು – 17 ಕೋಟಿ, ಪರಿಯಾರಂ ಮೆ. ಕಾಲೇಜು – 10 ಕೋಟಿ, ಸರ್ಕಾರಿ ಆಸ್ಪತ್ರೆ ಎರ್ನಾಕುಳಂ – 10 ಕೋಟಿ, ಅಲಪ್ಪುಳ ಮೆ. ಕಾಲೇಜು - ಸುಮಾರು 7 ಕೋಟಿಗಳು ಸಹಿತ 19 ಸರ್ಕಾರಿ ಆಸ್ಪತ್ರೆಗಳಿಂದ 143,08,57,254 ರೂ. ಪಾವತಿಸಲು ಬಾಕಿಯಿದೆ.
ಮಾರ್ಚ್ 31ರೊಳಗೆ ಪಾವತಿಸುವಂತೆ ಡಿ. 31ರಂದು ಚೇಂಬರ್ ಆಫ್ ಡಿಸ್ಟ್ರಿಬ್ಯೂಟರ್ಸ್ ಆಫ್ ಮೆಡಿಕಲ್ ಇಂಪ್ಲಾಂಟ್ಸ್ ಅಧಿಕಾರಿಗಳು ಅಧಿಕೃತರಿಗೆ ನೋಟಿಸ್ ನೀಡಿದ್ದರು. ಆದರೆ ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಸರ್ಕಾರಿ ಆಸ್ಪತ್ರೆಗಳಿಗೆ ಹಣ ನೀಡದಿರುವುದು ಆರೋಗ್ಯ ಕ್ಷೇತ್ರದ ಈಗಿನ ಬಿಕ್ಕಟ್ಟಿಗೆ ಕಾರಣ. ಆರೋಗ್ಯ ವಿಮಾ ಚಿಕಿತ್ಸಾ ನೆರವು ಯೋಜನೆಗಳ ಹಣವನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಬೇಕಿದೆ.