ಚೆರ್ನಿಗಿವ್: ಉತ್ತರ ಉಕ್ರೇನ್ ನಗರ ಚೆರ್ನಿಹಾಯಿವ್ ಮೇಲೆ ರಷ್ಯಾ ಬುಧವಾರ ಕ್ಷಿಪಣಿ ದಾಳಿ ನಡೆಸಿದೆ. ಪರಿಣಾಮ 14 ಜನರು ಮೃತಪಟ್ಟು, 61 ಜನರು ಜನರು ಗಾಯಗೊಂಡಿದ್ದಾರೆ.
16 ಕಟ್ಟಡಗಳಿಗೆ ಮತ್ತು ಹತ್ತಾರು ವಾಹನಗಳಿಗೆ ಹಾನಿಯಾಗಿದೆ. ಅವಶೇಷಗಳ ಅಡಿ ಸಿಲುಕಿರುವವರನ್ನು ರಕ್ಷಿಸುವ ಕೆಲಸದಲ್ಲಿ ರಕ್ಷಣಾ ಪಡೆಗಳು ನಿರತವಾಗಿವೆ ಎಂದು ಚೆರ್ನಿಹಾಯಿವ್‌ನ ಮೇಯರ್ ತಿಳಿಸಿದ್ದಾರೆ.
ರಷ್ಯಾ ದಾಳಿಯನ್ನು ಎದುರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕ್ಷಿಪಣಿಗಳನ್ನು ಉಕ್ರೇನ್‌ಗೆ ನೀಡುವಂತೆ ಅಲ್ಲಿಯ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಅವರು ಮಿತ್ರ ರಾಷ್ಟ್ರಗಳಿಗೆ ಮನವಿ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಎರಡು ವರ್ಷಗಳು ಕಳೆದರೂ ಚೆರ್ನಿಹಾಯಿವ್ ಪ್ರದೇಶದ ಮೇಲೆ ದಾಳಿ ನಡೆದಿರುವುದು ವಿರಳ. ಈಗ ಆ ಪ್ರದೇಶದ ಮೇಲೂ ಮಾರಣಾಂತಿಕ ದಾಳಿ ನಡೆದಿದೆ.
'ಮಿತ್ರರಾಷ್ಟ್ರಗಳಿಂದ ಉಕ್ರೇನ್‌ಗೆ ವಾಯುದಾಳಿ ನಿಗ್ರಹಿಸುವಂಥ ಸಾಧನಗಳು ದೊರೆತಿದ್ದರೆ, ರಷ್ಯಾದ ಭಯೋತ್ಪಾದನೆಯನ್ನು ನಿಗ್ರಹಿಸುವಂತೆ ಜಾಗತಿಕ ಮಟ್ಟದಲ್ಲಿ ನಿರ್ಧರಿಸಿದ್ದರೆ ಇಂದು ಇಂಥ ಪರಿಸ್ಥಿತಿ ಎದುರಾಗುತ್ತಿರಲಿಲ್ಲ' ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ದಾಳಿ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬ ಅವರು, ವಾಯುದಾಳಿಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಇಸ್ರೇಲ್ ಅಳವಡಿಸಿರುವ ಕ್ಷಿಪಣಿ ನಿಗ್ರಹಗಳನ್ನು ಉಕ್ರೇನ್ ಕೂಡ ಅಳವಡಿಸಬೇಕು ಎಂದಿದ್ದಾರೆ.
ವಾಯುದಾಳಿ ನಿಗ್ರಹ ವ್ಯವಸ್ಥೆಯನ್ನು ಉಕ್ರೇನ್‌ಗೆ ನೀಡಲು ಒಪ್ಪಿರುವುದಕ್ಕಾಗಿ ಅವರು ಜರ್ಮನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅದರೊಂದಿಗೆ, ದೇಶಕ್ಕೆ ಹೆಚ್ಚಿನ ಸಹಾಯ ಮಾಡುವಂತೆ ಸದಸ್ಯ ರಾಷ್ಟ್ರಗಳಿಗೆ ಈ ವಾರ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ.