ನವದೆಹಲಿ: ಯೋಗ ಗುರು ಬಾಬಾ ರಾಮದೇವ ಅವರಿಗೆ ಸೇರಿದ ಔಷಧ ಕಂಪನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು ಅಮಾನತಿನಲ್ಲಿ ಇರಿಸಿದೆ. ಔಷಧಗಳ ಸಾಮರ್ಥ್ಯದ ಬಗ್ಗೆ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನು ಮತ್ತೆ ಮತ್ತೆ ಪ್ರಕಟಿಸಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ.
ಈ ಆದೇಶವು ರಾಮದೇವ ಅವರಿಗೆ ಆಗಿರುವ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ರಾಮದೇವ ಅವರು ಈಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ನ ಕೋಪಕ್ಕೂ ತುತ್ತಾಗಿದ್ದಾರೆ.
ಉತ್ತರಾಖಂಡ ಸರ್ಕಾರವು ಏಪ್ರಿಲ್ 15ರಂದು ಈ ಅಮಾನತು ಆದೇಶ ಹೊರಡಿಸಿದೆ. ಅಸ್ತಮಾ, ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್) ಮತ್ತು ಮಧುಮೇಹ ಔಷಧಿಗಳ ತಯಾರಿಕಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ರಾಮದೇವ ಅವರ ವಕ್ತಾರರು ನಿರಾಕರಿಸಿದ್ದಾರೆ.