ಕಾಸರಗೋಡು: ಇತಿಹಾಸ ಪ್ರಸಿದ್ಧ ಬೇಕಲಕೋಟೆ ಮುಖ್ಯದ್ವಾರದಲ್ಲಿರುವ ಬೇಕಲಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಜೀರ್ಣೋದ್ಧಾರ ಅಷ್ಟಬಂಧ ಬ್ರಹ್ಮಕಲಶ, ವಾರ್ಷಿಕ ಮಹೋತ್ಸವ ಹಾಗೂ ಶ್ರೀರಾಮ ನವಮಿ ಹನುಮ ಜಯಂತಿ ವಿವಿಧ ಕಾರ್ಯಕ್ರಮಗಳೊಂದಿಗೆ ಏ. 16ರಿಂದ 23ರವರೆಗೆ ಜರುಗಲಿರುವುದಾಗಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವದಾಸ ನಾಯಕ ಬೇಕಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿ ಅವರ ನೇತೃತ್ವ, ಜಗದ್ಗುರು ಶೃಂಗೇರಿ ಶ್ರೀ ಭಾರತೀ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಧರ್ಮಸ್ಥಳ ದರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಕಾರ್ಯಕ್ರಮ ಜರುಗಲಿದೆ. ಏ.16ರಂದು ಬೆಳಗ್ಗೆ 10ಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ಸಂಜೆ 6.30ಕಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. 17ರಂದು ಶ್ರೀರಾಮ ನವಮಿ, ಉದಯಾಸ್ತಮಾನ ಶ್ರೀರಾಮನಾಮ ಜಪ ನಡೆಯುವುದು.
21ರಂದು ಬೆಳಗ್ಗೆ 10ರಿಂದ 11ರ ಮಧ್ಯೆ ಎಡನೀರುಶ್ರೀ ಸಚ್ಚಿದನಂದ ಭಾರತೀ ಸ್ವಾಮೀಜಿ ಅವರ ದಇವ್ಯ ಉಪಸ್ಥಿತಿಯಲ್ಲಿ ಶ್ರೀ ಮುಖ್ಯಪ್ರಾಣ ದೇವರಿಗೆ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುವುದು. 22ರಂದು ಬೆಳಗ್ಗೆ 9.30ಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, ಆಶೀರ್ವಚನ ನಡೆಯುವುದು.
23ರಂದು ಶ್ರೀ ಹನುಮಜಯಂತಿ ಉತ್ಸವ ಅಂಗವಾಗಿ ಬೆಳಗ್ಗೆ 5.30ಕ್ಕೆ ನಡೆ ತೆರೆಯುವುದು, ಅಭಿಷೇಕ, ಗಣಪತಿ ಹೋಮ, ಸೀಯಾಳಾಭಿಷೇಕ, ಪಂಚಾಮೃತಾಭಿಷೇಕ, ರಾತ್ರಿ 8ಕ್ಕೆ ರಕ್ತೇಶ್ವರಿ ತಂಬಿಲ, ರಾತ್ರಿ 9.30ಕ್ಕೆ ಭಜನೆ, ಮಹಾಪೂಜೆ, ಉತ್ಸವ ಬಲಿ, ಶ್ರೀದೇವರ ಬಲಿಮೆರವಣಿಗೆ, ಸುಡುಮದ್ದು ಪ್ರದರ್ಶನ ನಡೆಯುವುದು. ಪ್ರತಿ ದಿನ ಸಾಂಸ್ಕøತಿಕ ಕಾರ್ಯಕ್ರಮ, ಅನ್ನದಾನ ನಡೆಯಲಿದೆ. ಇಕ್ಕೇರಿ ರಾಜರಿಂದ ಸ್ಥಾಪಿಸಲ್ಪಟ್ಟಿರುವ ದೇವಸ್ಥಾನ ಪ್ರಸಕ್ತ ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿದ್ದು, ಪನಯಾಲ ಕುಟುಂಬದ ಟ್ರಸ್ಟಿ ಹಾಗೂ ಊರವರ ಸಹಕಾರದೊಂದಿಗೆ ಉತ್ಸವಾದಿಗಳು ನಡೆಯುತ್ತಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ವೀನರ್ ಎ.ಬಿ. ಪ್ರಕಾಶ್ ಪಳ್ಳಿಕ್ಕೆರೆ, ನವೀನ್‍ಕುಮಾರ್ ಅಕ್ಕರೆಮನೆ, ಪ್ರದೀಪ್ ಎಂ. ಕೂಟಕಣಿ, ವಾಸುದೇವ ಶೆಣೈ ಪಳ್ಳಿಕ್ಕರ ಉಪಸ್ಥಿತರಿದ್ದರು.