ಪ್ರಯಾಗ್‌ರಾಜ್: ಗಾಜಿಯಾಬಾದ್, ಆಗ್ರಾ ಮತ್ತು ಲಖನೌ ಸೇರಿದಂತೆ ಉತ್ತರ ಪ್ರದೇಶದ 30 ಜಿಲ್ಲೆಗಳ ವಿವಿಧ ಜೈಲುಗಳಲ್ಲಿರುವ 180 ಕೈದಿಗಳು 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತರ ಪ್ರದೇಶ ರಾಜ್ಯ ಪ್ರೌಢಶಾಲೆ ಮತ್ತು ಮಾಧ್ಯಮಿಕ ಶಿಕ್ಷಣ ಮಂಡಳಿಯು ಶನಿವಾರ ಫಲಿತಾಂಶ ಪ್ರಕಟಿಸಿದ್ದು, 10 ಮತ್ತು 12ನೇ ತರಗತಿಯಲ್ಲಿ ಕ್ರಮವಾಗಿ ಶೇ 89.55 ಮತ್ತು ಶೇ 82.60ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
10ನೇ ತರಗತಿ ಪರೀಕ್ಷೆಗೆ ಹಾಜರಾದ 91 ಕೈದಿಗಳಲ್ಲಿ 81 ಜನರು ಹಾಗೂ 12ನೇ ತರಗತಿ ಪರೀಕ್ಷೆ ಬರೆದ 105 ಕೈದಿಗಳಲ್ಲಿ 87 ಮಂದಿ ಉತ್ತೀರ್ಣರಾಗಿದ್ದಾರೆ.
12ನೇ ತರಗತಿ ಪರೀಕ್ಷೆ ಬರೆದ ಗಾಜಿಯಾಬಾದ್ ಜೈಲಿನ 21 ಕೈದಿಗಳ ಪೈಕಿ 17 ಮಂದಿ ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಬುಲಂದ್‌ಶಹರ್ ಜೈಲಿನ 11 ಕೈದಿಗಳ ಪೈಕಿ 10 ಹಾಗೂ ಹಾರ್ದೋಯ್ ಜೈಲಿನ ನಾಲ್ಕು ಮಂದಿ ಕೈದಿಗಳು ತೇರ್ಗಡೆಯಾಗಿದ್ದಾರೆ.