ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನಿನಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿಲ್ರ್ಯಕ್ಷವನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದ ಅಂಗವಾಗಿ ಎಪ್ರಿಲ್ 19 ರಂದು ಸಂಜೆ4ಕ್ಕೆ ಉದ್ಯಾವರದಿಂದ ಮಂಜೇಶ್ವರ ತನಕ ಬೃಹತ್ ಜನಪರ ಪ್ರತಿಭಟನಾ ಮೆರವಣಿಗೆ ಹಮ್ಮಿ ಕೊಂಡಿರುವುದಾಗಿ ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಷಟ್ಪಥ ರಸ್ತೆ ಕಾಮಗಾರಿ ಆರಂಭವಾಗುವ ಮೊದಲೇ ಜನರು ಈ ಬಗ್ಗೆ ಬೇಡಿಕೆ ಮುಂದಿರಿಸಿದ್ದರೂ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನತೆ ಪ್ರತಿಭಟನೆ ಹಾದಿ ಹಿಡಿಯುವಂತಾಗಿದೆ. ಎಪ್ರಿಲ್ 19 ರಂದು ರಾಜಕೀಯ ಜಾತಿ ಮತ ಭೇಧ ಮರೆತು ನಡೆಯಲಿರುವ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಲ್ಲ ಸಲ್ಲದ ಕಾರಣ ನೀಡಿ ಲೋಪ ಮರೆಮಾಚಲು ಯತ್ನಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಶೇ.100ರಷ್ಟು ಪೂರ್ಣಗೊಂಡ ಪ್ರದೇಶಗಳಲ್ಲಿ ಅಂಡರ್ ಪಾಸ್ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಿದ್ದರೆ ಮಂಜೇಶ್ವರ ರಾಗಂ ಜಂಕ್ಷನ್‍ನಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.
ಸುದ್ದಿ ಗೋಷ್ಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಸಂಜೀವ ಶೆಟ್ಟಿ ಮಾಡ, ಅಶ್ರಫ್ ಬಡಾಜೆ, ಜಬ್ಬಾರ್ ಬಹರೈನ್, ಎಸ್.ಎಂ.ಬಶೀರ್, ಹನೀಫ ಸುರಭಿ. ಮಜೀದ್ ಕುನ್ನು, ಝಕರಿಯಾ ಮಂಜೇಶ್ವರ. ಸಾದಿಕ್ ಕುನ್ನು, ಅಬ್ದುಲ್ ರವೂಫ್ ಮೊದಲಾದವರು ಪಾಲ್ಗೊಂಡಿದ್ದರು.