ಸೋಲಾಪುರ: ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಒಂದು ವರ್ಷ, ಒಬ್ಬ ಪ್ರಧಾನಿ ಎಂಬ ಸೂತ್ರದೊಂದಿಗೆ ಕೆಲಸ ಮಾಡಲು ಬಯಸುತ್ತಿದೆ. ಆಂತರಿಕವಾಗಿ ನಾಯಕನ ಆಯ್ಕೆಯ ಬಗ್ಗೆ ದೊಡ್ಡ ಯುದ್ಧವೇ ನಡೆಯುತ್ತಿದೆ. ನಾಯಕ ಯಾರೆಂದು ತಿಳಿಯದೆಯೇ ಈ ದೇಶದ ಅಧಿಕಾರವನ್ನು ಅವರಿಗೆ ಹಸ್ತಾಂತರಿಸಲಾಗುವುದೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪ್ರಶ್ನಿಸಿದ್ದಾರೆ.
ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ದೇಶಕ್ಕೆ ಪರಿಚಯಿಸಲು ಇಂಡಿಯಾ ಮೈತ್ರಿಕೂಟ ಯೋಚಿಸಿದೆ. ಇಂತಹ ಪರಿಕಲ್ಪನೆಯನ್ನು ನೀವು (ಜನರು) ಬೆಂಬಲಿಸುತ್ತೀರಾ ಎಂದು ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟವು ಒಂದು ವರ್ಷ, ಒಬ್ಬ ಪ್ರಧಾನಿ ಕಲ್ಪನೆಯೊಂದಿಗೆ ಅಧಿಕಾರ ಹಿಡಿಯುವ ಆಲೋಚನೆಯೊಂದಿಗೆ ದೇಶವನ್ನು ವಿಭಜಿಸುವ ಪ್ರಯತ್ನದಲ್ಲಿದೆ ಎಂದು ಆರೋಪಿಸಿದರು.
'ನಮ್ಮ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಸಾಮಾಜಿಕ ನ್ಯಾಯ ಒದಗಿಸಿದೆ. ಈ ಮೂಲಕ ದೇಶದಲ್ಲಿ ಏಕತೆಯನ್ನು ಕಾಪಾಡಿದೆ. ದೇಶದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆ ತಂದಿದ್ದೇವೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಕಾಶ್ಮೀರದಲ್ಲಿ ಜಾರಿಗೆ ತರಲು ಕಾಂಗ್ರೆಸ್ ಅವಕಾಶ ಕಲ್ಪಿಸಿರಲಿಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10ರಷ್ಟು ಮೀಸಲಾತಿಯನ್ನು ಒದಗಿಸಿದ್ದೇವೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.