ಇಂಫಾಲ: ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲು ಭಾರತದ ಚುನಾವಣಾ ಆಯೋಗ ಆದೇಶ ನೀಡಿದೆ. ಇಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಅಂದರೆ ಏಪ್ರಿಲ್ 19ರಂದು ಮತದಾನ ನಡೆದಿತ್ತು.

ಹಿಂಸಾಪೀಡಿತ ರಾಜ್ಯದ ಇಂಫಾಲ ಪೂರ್ವ ಮತ್ತು ಇಂಫಾಲ ಪಶ್ಚಿಮ ಜಿಲ್ಲೆಗಳಲ್ಲಿ ಹರಡಿರುವ ಈ 11 ಮತಗಟ್ಟೆಗಳಲ್ಲಿ ಮರು ಮತದಾನ ಏಪ್ರಿಲ್ 22ರಂದು ಮುಂಜಾನೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ.
"ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 58(2) ಮತ್ತು 58ಎ(2) ಅನ್ವಯ ಏಪ್ರಿಲ್ 19ರಂದು ಮತದಾನ ನಡೆದ ಐಎಂಪಿಸಿ ಕ್ಷೇತ್ರದ 11 ಮತಗಟ್ಟೆಗಳ ಮತದಾನವನ್ನು ರದ್ದುಪಡಿಸಲಾಗಿದ್ದು, ಹೊಸದಾಗಿ ಮತದಾನ ಮಾಡಲು 2024ರ ಏಪ್ರಿಲ್ 22ರ ದಿನ ನಿಗದಿಪಡಿಸಲಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ" ಎಂದು ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
"ಈ ಮತಗಟ್ಟೆಗಳ ವ್ಯಾಪ್ತಿಯ ಎಲ್ಲ ಮತದಾರರು ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಲು ಕೋರಲಾಗುತ್ತಿದೆ" ಎಂದು ಪ್ರಕಟಣೆ ಹೇಳಿದೆ.
ಇದಕ್ಕೂ ಮುನ್ನ ಮಣಿಪುರದ ಮುಖ್ಯ ಜಂಟಿ ಚುನಾವಣಾ ಅಧಿಕಾರಿ, ಮತಗಟ್ಟೆ ಅಧಿಕಾರಿಗಳ ಸಂದೇಶದೊಂದಿಗೆ ಭಾರತದ ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಮಾಡಿಕೊಂಡಿದ್ದರು. ಆರು ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಮತಗಟ್ಟೆ ಅಧಿಕಾರಿ ಕೋರಿದ್ದರು.