ನಲ್ಬರಿ: 2014ರಲ್ಲಿ ಭರವಸೆಯೊಂದಿಗೆ, 2019ರಲ್ಲಿ ನಂಬಿಕೆಯಿಂದ ಜನರ ಬಳಿಗೆ ಹೋಗಿದ್ದ ತಾವು 2024ರಲ್ಲಿ ಗ್ಯಾರಂಟಿಯೊಂದಿಗೆ ಅದೇ ಜನರಲ್ಲಿಗೆ ಹೋಗುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.
ಇಲ್ಲಿನ ಬೋರ್ಕುರಾ ಮೈದಾನದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ಈಶಾನ್ಯ ಭಾಗವು ಮೋದಿ ಗ್ಯಾರಂಟಿಗೆ ಸಾಕ್ಷಿಯಾಗಿದೆ.
'ಕಾಂಗ್ರೆಸ್ ಬಂಡುಕೋರರನ್ನು ಪ್ರಚೋದಿಸಿತು. ಆದರೆ, ಮೋದಿ ಜನರನ್ನು ಅಪ್ಪಿಕೊಂಡ ಮತ್ತು ಪ್ರಾಂತ್ಯದಲ್ಲಿ ಶಾಂತಿ ಮೂಡಿಸಿದ. ಕಾಂಗ್ರೆಸ್ 60 ವರ್ಷದಿಂದ ಸಾಧಿಸಲು ಆಗದೇ ಇದ್ದುದನ್ನು ಮೋದಿ ಹತ್ತು ವರ್ಷದಲ್ಲಿ ಸಾಧಿಸಿದ' ಎಂದು ಹೇಳಿಕೊಂಡರು.
'ಕಾಂಗ್ರೆಸ್ ಈಶಾನ್ಯ ಪ್ರದೇಶವನ್ನು ನಿರ್ಲಕ್ಷಿಸಿ, ಭ್ರಷ್ಟಾಚಾರ ಮತ್ತು ಲೂಟಿಯಲ್ಲಿ ತೊಡಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಇಲ್ಲಿನ ಜನ ಸಬ್ ಕಾ ಸಾಥ್, ಸಬ್ ಕಾ ವಿಕಾಸ್'ನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ' ಎಂದು ಅವರು ಪ್ರತಿಪಾದಿಸಿದರು.
'ಪ್ರಣಾಳಿಕೆಯಲ್ಲಿ ನೀಡಲಾಗಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು. ಅದರಿಂದ ಬಡವರಿಗೆ, ರೈತರಿಗೆ, ದಲಿತರಿಗೆ ಮತ್ತು ಚಹಾ ತೋಟಗಳ ಕಾರ್ಮಿಕರಿಗೆ ಅನುಕೂಲವಾಗಲಿದೆ' ಎಂದು ಹೇಳಿದರು.
ತ್ರಿಪುರಾದಲ್ಲಿಯೂ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಲ್ಲಿಯೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೊಬೈಲ್ ಲೈಟ್ ಆನ್ ಮಾಡಲು ಕರೆ
ಅಯೋಧ್ಯೆಯಲ್ಲಿ 500 ವರ್ಷಗಳ ನಂತರ ರಾಮನ ಜನ್ಮದಿನವನ್ನು 'ಸೂರ್ಯ ತಿಲಕ'ದೊಂದಿಗೆ ಆಚರಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 'ನಾವು ಅಯೋಧ್ಯೆಯಲ್ಲಿನ ಆಚರಣೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆದರೆ ನಮ್ಮ ಮೊಬೈಲ್ ಫ್ಲಾಶ್‌ಲೈಟ್‌ಗಳನ್ನು ಆನ್ ಮಾಡುವ ಮೂಲಕ ರಾಮನಿಗೆ ಬೆಳಕು ಮತ್ತು ಪ್ರಾರ್ಥನೆ ತಲುಪಿಸೋಣ' ಎಂದು ಮೋದಿ ಜನರಿಗೆ ಕರೆ ನೀಡಿದರು. ರಾಮಮಂದಿರದಲ್ಲಿ ರಾಮನ ಜನ್ಮದಿನ ಆಚರಣೆಯಿಂದ ಇಡೀ ದೇಶದಲ್ಲಿ ಹೊಸ ವಾತಾವರಣ ಮೂಡಿದೆ ಎಂದು ಅವರು ಅಭಿಪ್ರಾಯಪಟ್ಟರು.