HEALTH TIPS

2014ರ ನಂತರ ಇ.ಡಿ ಶೋಧ 86 ಪಟ್ಟು ಹೆಚ್ಚಳ: ಆಸ್ತಿ ಜ‍‍ಪ್ತಿ 25 ಪಟ್ಟು ಜಾಸ್ತಿ

 ವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಕೈಗೊಂಡ ಶೋಧ ಕಾರ್ಯಗಳು 2014ರ ನಂತರದಲ್ಲಿ 86 ಪಟ್ಟು ಹೆಚ್ಚಾಗಿವೆ. ಬಂಧನ ಹಾಗೂ ಆಸ್ತಿ ಜ‍‍ಪ್ತಿ ಸರಿಸುಮಾರು 25 ಪಟ್ಟು ಜಾಸ್ತಿ ಆಗಿವೆ.

2014ಕ್ಕೂ ಮೊದಲಿನ ಒಂಬತ್ತು ವರ್ಷಗಳ ಜೊತೆ ಹೋಲಿಸಿದಾಗ ಈ ಪ್ರಮಾಣದ ಏರಿಕೆ ಕಂಡುಬಂದಿದೆ.

2005ರ ಜುಲೈನಿಂದ 2014ರ ಮಾರ್ಚ್‌ವರೆಗಿನ ದತ್ತಾಂಶವನ್ನು ಪಿಟಿಐ ಸುದ್ದಿಸಂಸ್ಥೆಯು 2014ರ ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗಿನ ದತ್ತಾಂಶಗಳ ಜೊತೆ ಹೋಲಿಸಿ ನೋಡಿದೆ. ಪಿಎಂಎಲ್‌ಎ ಅಡಿಯಲ್ಲಿ ಇ.ಡಿ ಕ್ರಮ ಕೈಗೊಳ್ಳುವುದು ತೀವ್ರಗೊಂಡಿರುವುದನ್ನು ಈ ವಿಶ್ಲೇಷಣೆಯು ತೋರಿಸಿಕೊಟ್ಟಿದೆ.

ಪಿಎಂಎಲ್‌ಎ ಕಾನೂನನ್ನು 2002ರಲ್ಲಿ ರೂಪಿಸಲಾಯಿತು. ಇದನ್ನು 2005ರ ಜುಲೈ 1ರಂದು ಜಾರಿಗೆ ತರಲಾಯಿತು. ಗಂಭೀರ ಸ್ವರೂಪದ ತೆರಿಗೆ ವಂಚನೆ, ಕಪ್ಪು ಹಣದ ಸೃಷ್ಟಿ ಹಾಗೂ ಹಣದ ಅಕ್ರಮ ವರ್ಗಾವಣೆಯನ್ನು ತಡೆಯುವುದು ಈ ಕಾಯ್ದೆಯ ಉದ್ದೇಶ.

ಕಳೆದ ಒಂದು ದಶಕದ ಅವಧಿಯಲ್ಲಿ ಇ.ಡಿ ಕೈಗೊಂಡ ಕ್ರಮಗಳು, ವಿರೋಧಿಗಳನ್ನು ಹತ್ತಿಕ್ಕಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸಿದ ವಿವಿಧ ತಂತ್ರಗಳ ಒಂದು ಭಾಗ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಆದರೆ, ಇ.ಡಿ ನಡೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ ಮತ್ತು ಬಿಜೆಪಿ, ಈ ಸಂಸ್ಥೆಯು ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ, ಪ್ರಕರಣಗಳ ಸತ್ಯಾಸತ್ಯತೆಯನ್ನು ಆಧರಿಸಿ ತನಿಖೆ ನಡೆಸುತ್ತದೆ ಎಂದು ಹೇಳಿವೆ.

ಕಳೆದ ಒಂದು ದಶಕದ ಅವಧಿಯಲ್ಲಿ ಇ.ಡಿ 36 ಪ್ರಕರಣಗಳಲ್ಲಿ ಒಟ್ಟು 63 ಮಂದಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಂಡಿದೆ. ಆದರೆ 2005ರಿಂದ 2014ರವರೆಗಿನ ಅವಧಿಯಲ್ಲಿ ಯಾವ ಪ್ರಕರಣದಲ್ಲಿಯೂ ಶಿಕ್ಷೆ ಆಗಿರಲಿಲ್ಲ.

ಪಿಎಂಎಲ್‌ಎ ಅಡಿಯಲ್ಲಿ ನಗದು ವಶಪಡಿಸಿಕೊಳ್ಳಲು ಕೂಡ ಇ.ಡಿ. ಅಧಿಕಾರಿಗಳಿಗೆ ಅವಕಾಶ ಇದೆ. ಕಳೆದ ಒಂದು ದಶಕದಲ್ಲಿ ಅಧಿಕಾರಿಗಳು ಒಟ್ಟು ₹2,310 ಕೋಟಿಗೂ ಹೆಚ್ಚಿನ ಮೌಲ್ಯದ ನಗದನ್ನು ವಶಪಡಿಸಿಕೊಂಡಿದ್ದಾರೆ. ಆದರೆ, 2005ರಿಂದ 2014ರವರೆಗಿನ ಅವಧಿಯಲ್ಲಿ ಇ.ಡಿ ವಶಪಡಿಸಿಕೊಂಡ ನಗದಿನ ಮೌಲ್ಯ ₹43 ಲಕ್ಷ ಮಾತ್ರ.

'ಈ ಎಲ್ಲ ಅಂಕಿ-ಅಂಶಗಳು ಹಣದ ಅಕ್ರಮ ವರ್ಗಾವಣೆಯನ್ನು ತಡೆಯಲು ಇ.ಡಿ. ನಡೆಸುತ್ತಿರುವ ತೀವ್ರ ಸ್ವರೂಪದ ಕಾರ್ಯಾಚರಣೆಗಳನ್ನು ತೋರಿಸುತ್ತಿವೆ' ಎಂದು ಅಧಿಕಾರಿಯೊಬ್ಬರು ವಿವರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries