ಕೋಲ್ಕತ್ತ: ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ನಡೆದಿದ್ದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016 (ಎಸ್‌ಎಲ್‌ಎಸ್‌ಟಿ) ಅನ್ನು ಅನೂರ್ಜಿತಗೊಳಿಸಿ ಕಲ್ಕತ್ತ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಈ ಮೂಲಕ ಮಾಡಲಾದ ಎಲ್ಲ ನೇಮಕಾತಿಗಳನ್ನು ರದ್ದುಗೊಳಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಮೊಹಮ್ಮದ್ ಶಬ್ಬರ್ ರಶೀದಿ ಅವರನ್ನೊಳಗೊಂಡ ವಿಭಾಗೀಯ ಪೀಠವು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲು ಮತ್ತು ಮೂರು ತಿಂಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗಕ್ಕೆ ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಪೀಠವು ಸೂಚಿಸಿದೆ.
24,640 ಖಾಲಿ ಹುದ್ದೆಗಳಿಗೆ 23 ಲಕ್ಷ ಅಭ್ಯರ್ಥಿಗಳು SLST-2016 ಪರೀಕ್ಷೆ ಬರೆದಿದ್ದರು.
24,640 ಖಾಲಿ ಹುದ್ದೆಗಳಿಗೆ ಒಟ್ಟು 25,753 ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಫಿರ್ದೌಸ್ ಶಮೀಮ್ ಆರೋಪಿಸಿದ್ದಾರೆ.
'ಈ ದಿನಕ್ಕಾಗಿ ನಾವು ಕಾಯುತ್ತಿದ್ದೆವು. ಹಲವು ವರ್ಷಗಳ ಹೋರಾಟದ ಬಳಿಕ ಕೊನೆಗೂ ನ್ಯಾಯ ಸಿಕ್ಕಿದೆ' ಉದ್ಯೋಗ ಆಕಾಂಕ್ಷಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿಭಾಗೀಯ ಪೀಠವನ್ನು ರಚಿಸಿದ್ದರು. 9,10,11,12ನೇ ತರಗತಿಯ ಶಿಕ್ಷಕರು ಸಿ, ಡಿ ದರ್ಜೆ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ 2016 ಎಸ್‌ಎಲ್‌ಎಸ್‌ಟಿ ನೇಮಕಾತಿ ಬಗ್ಗೆ ನ್ಯಾಯಪೀಠ ಬಹಳಷ್ಟು ಅರ್ಜಿಗಳು ಮತ್ತು ಮನವಿಗಳನ್ನು ಆಲಿಸಿತ್ತು.