ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಆದಾಯ 2023-24 ನೇ ಸಾಲಿನಲ್ಲಿ ಶೇ.11 ರಷ್ಟು ಏರಿಕೆ ಕಂಡಿದೆ. ಈ ಹಿಂದಿನ ಆರ್ಥಿಕ ವರ್ಷದಲ್ಲಿ ಹೆಚ್ಎಎಲ್ ನ ಆದಾಯ ಶೇ.9 ರಷ್ಟು ಏರಿಕೆಯಾಗಿತ್ತು. ಈ ಬಾರಿಯ ಆದಾಯ 29,810 ಕೋಟಿ ರೂಪಾಯಿಯಷ್ಟಿದೆ.
ಕಳೆದ ವರ್ಷ ಹೆಚ್ಎಎಲ್ ನ ಆದಾಯ 26,928 ಕೋಟಿ ರೂಪಾಯಿಗಳಷ್ಟಿತ್ತು ಎಂದು ರಕ್ಷಣಾ ವಿಭಾಗದ ಸರ್ಕಾರಿ ಸ್ವಾಮ್ಯದ ಸಂಸ್ಥೆ ಹೇಳಿದೆ. ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಹೆಚ್ಚುವರಿ ಜವಾಬ್ದಾರಿ), ಸಿಬಿ ಅನಂತಕೃಷ್ಣನ್ ಮಾತನಾಡಿ, ಭೌಗೋಳಿಕ ರಾಜಕೀಯ ಸಮಸ್ಯೆಗಳಿಂದಾಗಿ ಪ್ರಮುಖ ಪೂರೈಕೆ ಸರಪಳಿ ಸವಾಲುಗಳು ಉದ್ಭವಿಸಿದರೂ, ಕಂಪನಿಯು ಇಡೀ ವರ್ಷ ಸುಧಾರಿತ ಕಾರ್ಯಕ್ಷಮತೆಯೊಂದಿಗೆ ನಿರೀಕ್ಷಿತ ಆದಾಯದ ಬೆಳವಣಿಗೆಯನ್ನು ಸಾಧಿಸಿದೆ ಎಂದು ಹೇಳಿದ್ದಾರೆ.
"ಮಾರ್ಚ್ 31, 2024 ರಂತೆ, ಕಂಪನಿಯ ಆರ್ಡರ್ ಬುಕ್ 94,000 ಕೋಟಿ ರೂ.ಗಳನ್ನು ಮೀರಿದೆ ಮತ್ತು 2024-25ರಲ್ಲಿ ಹೆಚ್ಚುವರಿ ಪ್ರಮುಖ ಆರ್ಡರ್ ಗಳನ್ನು ನಿರೀಕ್ಷಿಸಲಾಗಿದೆ" ಎಂದು ಅನಂತಕೃಷ್ಣನ್ ಹೇಳಿದರು.
2023-24ರ ಅವಧಿಯಲ್ಲಿ HAL 19,000 ಕೋಟಿ ರೂ.ಗಳ ಹೊಸ ಉತ್ಪಾದನಾ ಒಪ್ಪಂದಗಳನ್ನು ಮತ್ತು 16,000 ಕೋಟಿ ರೂ.ಗಿಂತ ಹೆಚ್ಚಿನ ರಿಪೇರಿ ಮತ್ತು ಕೂಲಂಕಷ ಪರೀಕ್ಷೆ (ROH) ಒಪ್ಪಂದಗಳನ್ನು ಹೊಂದಿದೆ ಎಂದು ಹೇಳಿದೆ. 2023-24ರ ಅವಧಿಯಲ್ಲಿ ಎರಡು ಹಿಂದೂಸ್ತಾನ್-228 ವಿಮಾನಗಳ ಪೂರೈಕೆಗಾಗಿ ಗಯಾನಾ ರಕ್ಷಣಾ ಪಡೆಗಳೊಂದಿಗೆ ರಫ್ತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. LCA Mk1A ಯ ಮೊದಲ ಉತ್ಪಾದನಾ ಸರಣಿಯ ಯುದ್ಧವಿಮಾನ ಮಾರ್ಚ್ 28, 2024 ರಂದು ತನ್ನ ಮೊದಲ ಹಾರಾಟವನ್ನು ಪೂರ್ಣಗೊಳಿಸುವುದರೊಂದಿಗೆ ಮೈಲಿಗಲ್ಲನ್ನು ಸಾಧಿಸಲಾಯಿತು ಎಂದು ಸಂಸ್ಥೆ ತಿಳಿಸಿದೆ.
LCA MK2 ವಿಮಾನಕ್ಕೆ ಜಿಇ-414 ಏರೋ-ಎಂಜಿನ್ ನ್ನು ಭಾರತದಲ್ಲಿ ತಯಾರಿಸುವುದಕ್ಕೆ 2023-24 ರ ಆರ್ಥಿಕ ವರ್ಷದಲ್ಲಿ ಹೆಚ್ಎಎಲ್ ಹಾಗೂ ಅಮೇರಿಕಾದ ಜನರಲ್ ಎಲೆಕ್ಟ್ರಿಕ್ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಯೋಜನೆಯ ಭಾಗವಾಗಿ ಭಾರತ ಶೇ.80ರಷ್ಟು ತಂತ್ರಜ್ಞಾನ ವರ್ಗಾವಣೆಯನ್ನು ಪಡೆಯುತ್ತದೆ, ಇದು ಭಾರತೀಯ ಏರೋ ಎಂಜಿನ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ವಾವಲಂಬಿಯಾಗಿ ಪರಿವರ್ತಿಸುತ್ತದೆ ಎಂದು ಹೆಚ್ಎಎಲ್ ತಿಳಿಸಿದೆ.