ನವದೆಹಲಿ: ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯಲಿರುವ ಈಶಾನ್ಯ ರಾಜ್ಯಗಳು ಮತ್ತಿತರ ಪ್ರದೇಶಗಳಲ್ಲಿ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯವಾಗಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 19 ರಂದು ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಲೋಕಸಭೆಯ 543 ಸ್ಥಾನಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.
ಕೇಂದ್ರದ ಬಿಜೆಪಿ ಸರ್ಕಾರ ಈಶಾನ್ಯವನ್ನು ಅವಕಾಶಗಳ ಮೂಲವಾಗಿ ಪರಿವರ್ತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಅಸ್ಸಾಂ ಮತ್ತು ತ್ರಿಪುರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿಯನ್ನು ‘ಭ್ರಷ್ಟಾಚಾರದ ಚಾಂಪಿಯನ್’ ಎಂದು ಕರೆದಿದ್ದು, ಚುನಾವಣೆಯ ಸಮಯದಲ್ಲಿ ನೈಜ ಸಮಸ್ಯೆಗಳಿಂದ ಅವರು ವಿಚಲಿತರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ರದ್ದಾದ ಎಲೆಕ್ಟೋರಲ್ ಬಾಂಡ್‌ಗಳ ಯೋಜನೆ ಕುರಿತ ಪ್ರಧಾನಿ ಮೋದಿಯವರ ಇತ್ತೀಚಿನ ಸಮರ್ಥನೆಯನ್ನು ಗಾಂಧಿ ಉಲ್ಲೇಖಿಸಿದ್ದಾರೆ.
ಗಾಜಿಯಾಬಾದ್ ನಲ್ಲಿ ಬುಧವಾರ ಇಂಡಿಯಾ ಮೈತ್ರಿಕೂಟದ ಅಂಗಪಕ್ಷ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ಪಶ್ಚಿಮ ಯುಪಿಯಿಂದ ಬಿಜೆಪಿ ನಿರ್ನಾಮವಾಗಲಿದೆ ಎಂದು ಯಾದವ್ ಭವಿಷ್ಯ ನುಡಿದರು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಇಂಡಿಯಾ ಬ್ಲಾಕ್‌ನ ಹಾಡನ್ನು ಸಹ ಬಿಡುಗಡೆ ಮಾಡಲಾಯಿತು.