ಬದಿಯಡ್ಕ: ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದೊಂದಿಗೆ ಆರು ದಿನಗಳ ಕನ್ನಡ ಸಂಸ್ಕೃತಿ ಶಿಬಿರ 2024 ಸೋಮವಾರ ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಶಾಲೆಯಲ್ಲಿ ಆರಂಭಗೊಂಡಿತು. ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪಪ್ರಜ್ವಲನೆಗೈದು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಇಂತಹ ಶಿಬಿರಗಳು ಪರಿಣಾಮಕಾರಿ. ಬೇಸಿಗೆ ರಜಾ ದಿನಗಳನ್ನು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಸಮರ್ಪಕವಾಗಿ ಬಳಸಿಕೊಂಡಾಗ ಮುಂದಿನ ತಲೆಮಾರು ಸಮರ್ಥವಾಗಿ ಬೆಳೆದುಬರಲು ಸಾಧ್ಯ. ಭೂಮಿಕಾ ಪ್ರತಿಷ್ಠಾನದ ಸಮಾಜಪರ ಚಟುವಟಿಕೆಗಳು ಮಾದರಿಯಾದುದು ಎಂದು ತಿಳಿಸಿದರು.
ಪ್ರಸಿದ್ಧ ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಕ್ರಿಯಾತ್ಮಕವಾದ ಬದುಕು ಹುರುಪಿನೊಂದಿಗೆ ಬದುಕುವ ಛಲವನ್ನು ದೃಢಗೊಳಿಸುತ್ತದೆ. ವಿದ್ಯಾರ್ಥಿಗಳ ಆಂತರಂಗಿಕ ತುಡಿತಗಳನ್ನು ಸಮರ್ಥವಾಗಿ ಬೆಳಕಿಗೆ ತರುವ ಇಂತಹ ಚಟುವಟಿಕೆಗಳನ್ನು ಬೆಂಬಲಿಸುವ ಭೂಮಿಕಾ ಪ್ರತಿಷ್ಠಾನದ ಕರ್ತೃತ್ವ ಸ್ತ್ಯುತ್ಯರ್ಹವಾದುದು ಎಂದರು.
ಸಮಾರಂಭದಲ್ಲಿ ಯುವ ಸಾಧಕ, ಕೈಗಾರಿಕಾ ವಲಯದಲ್ಲಿ ಜಿಲ್ಲಾಮಟ್ಟದ ಉತ್ಪಾದನಾ ಉದ್ಯಮಿ ಪ್ರಶಸ್ತಿ ಪಡೆದ ಉದ್ಯಮಿ ಮುರಲೀಕೃಷ್ಣ ಕೆ.ಪಿ. ಸ್ಕಂದ ಪ್ಲಾಸ್ಟಿಕ್ಸ್ ಕೋಟೂರು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷೆ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದಲ್ಲಿ ಪ್ರಸ್ತುತಿಗೊಳ್ಳಲಿರುವ ಚಟುವಟಿಕೆಗಳನ್ನು ತಿಳಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅನಿರುದ್ದ ವಸಿಷ್ಠ ಶರ್ಮ ಸ್ವಾಗತಿಸಿದರು. ಕೋಶಾಧಿಕಾರಿ ರಾಘವೇಂದ್ರ ಭಟ್ ಉಡುಪಮೂಲೆ ನಿರೂಪಿಸಿದರು. ಅಮೋಘಮೂರ್ತಿ ಸುಳ್ಯ ಪ್ರಾರ್ಥನೆ ಹಾಡಿದರು. ಬಳಿಕ ಪಟ್ಟಾಭಿರಾಮ ಸುಳ್ಯ ಹಾಗೂ ವೆಂಕಟ್ ಭಟ್ ಎಡನೀರು ಅವರಿಂದ ವ್ಯಗ್ಯಚಿತ್ರ ರಚನೆ ಸಹಿತ ವಿವಿಧ ವಿಷಯಗಳ ಬಗ್ಗೆ ತರಬೇತಿ ನಡೆಯಿತು. ಏ.6 ರವರೆಗೆ ಶಿಬಿರ ನಡೆಯಲಿದೆ.