ನವದೆಹಲಿ: ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಅಧಿವೇಶನಗಳು 2023ನೆ ಸಾಲಿನಲ್ಲಿ ಸರಾಸರಿ 22 ದಿನಗಳಷ್ಟೇ ನಡೆದಿವೆ. ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಶೀತಲಸಮರದ ಪರಿಣಾಮ, ಕೆಲ ರಾಜ್ಯಗಳಲ್ಲಿ ಅಧಿವೇಶನವನ್ನು ಮುಂದೂಡದೇ ಕಲಾಪವನ್ನು ಆರು ತಿಂಗಳವರೆಗೂ ಲಂಬಿಸಲಾಗಿದೆ.
'ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್' ಸಂಸ್ಥೆಯ ವರದಿ ಪ್ರಕಾರ, 2023ರಲ್ಲಿ ರಾಜ್ಯ ವಿಧಾನಮಂಡಲಗಳ ಅಧಿವೇಶನ ಸರಾಸರಿ 22 ದಿನ ನಡೆದಿದ್ದು, ಸರಾಸರಿ ಕಲಾಪದ ಅವಧಿಯು 5 ಗಂಟೆಗಳಾಗಿವೆ.
2023ರಲ್ಲಿ 7 ರಾಜ್ಯಗಳಲ್ಲಿ ಅಧಿವೇಶನ ಮುಂದೂಡದೇ ಕಲಾಪವನ್ನು ನಡೆಸದೇ ಅವಧಿ ಲಂಬಿಸಲಾಗಿದೆ. ಎರಡು ಕಲಾಪಗಳ ನಡುವಿನ ಅಂತರ ಆರು ತಿಂಗಳಿಗೂ ಹೆಚ್ಚು ಕಾಲವಿತ್ತು ಎಂದು ವರದಿ ಹೇಳಿದೆ.
ಸಂವಿಧಾನದ ಪ್ರಕಾರ, ರಾಜ್ಯ ಶಾಸನಸಭೆಗಳ ಅಧಿವೇಶನ ಕನಿಷ್ಠ 6 ತಿಂಗಳಿಗೊಮ್ಮೆ ನಡೆಯಬೇಕು. ಇಲ್ಲಿ ಬಹುತೇಕ ಶೇ 62ರಷ್ಟು ಕಲಾಪ ಬಜೆಟ್ ಅಧಿವೇಶನದ ಅವಧಿಯದ್ದೇ ಆಗಿದೆ ಎಂದು ವರದಿ ಉಲ್ಲೇಖಿಸಿದೆ.
ದೆಹಲಿಯಲ್ಲಿ ಆ ವರ್ಷ ವಿಧಾನಸಭೆ ಅಧಿವೇಶನ ಮಾರ್ಚ್‌ನಿಂದ ಡಿಸೆಂಬರ್‌ವರೆಗೆ ನಡೆದಿದ್ದರೆ, ಪಂಜಾಬ್‌ನಲ್ಲಿ ಮಾರ್ಚ್‌ನಿಂದ ಅಕ್ಟೋಬರ್‌ವರೆಗೆ ನಡೆದಿದೆ. ಈ ಅವಧಿಯಲ್ಲಿ ಸದನ ಸೇರಿರುವುದು ಕ್ರಮವಾಗಿ 14 ಮತ್ತು 10 ಬಾರಿ ಮಾತ್ರ ಎಂದು ತಿಳಿಸಿದೆ.
ರಾಜ್ಯಪಾಲರು ಬಜೆಟ್ ಅಧಿವೇಶನ ಕರೆಯುತ್ತಿಲ್ಲ ಎಂದು ಆರೋಪಿಸಿ ಪಂಜಾಬ್ ಸರ್ಕಾರವು ಫೆಬ್ರುವರಿ 2023ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ರಾಜ್ಯ ಸಚಿವ ಸಂಪುಟದ ಸಲಹೆಗೆ ರಾಜ್ಯಪಾಲರು ಬದ್ಧರಾಗಿರಬೇಕು ಎಂದು ಕೋರ್ಟ್ ತಾಕೀತು ಮಾಡಿತ್ತು.
ಅಂತೆಯೇ ರಾಜಸ್ಥಾನದಲ್ಲಿ ಜನವರಿಯಿಂದ ಆಗಸ್ಟ್‌ವರೆಗೂ ಅಧಿವೇಶನದ ಅವಧಿ ಇತ್ತು. 2021 ಮತ್ತು 2022ರಲ್ಲಿ ರಾಜಸ್ಥಾನದಲ್ಲಿ ಒಂದು ಬಾರಿಯಷ್ಟೇ ಅಧಿವೇಶನ ಕರೆಯಲಾಗಿತ್ತು. ಅದರ ಅವಧಿಯೂ ಜನವರಿಯಿಂದ ಡಿಸೆಂಬರ್‌ವರೆಗೂ ಮುಂದುವರಿದಿತ್ತು.
ಪಶ್ಚಿಮ ಬಂಗಾಳದಲ್ಲಿ 2023ರ ಜುಲೈನಲ್ಲಿ ಅಧಿವೇಶನ ಆರಂಭವಾಗಿತ್ತು. 2024ರ ಮಾರ್ಚ್‌ವರೆಗೆ ಅದನ್ನು ಮುಂದೂಡಿರಲಿಲ್ಲ. ಫೆಬ್ರುವರಿಯಲ್ಲಿ ಬಜೆಟ್ ಅಂಗೀಕರಿಸಲು ಕಲಾಪ ನಡೆದಿತ್ತು. ಆದರೆ, ರಾಜ್ಯಪಾಲರ ಸಾಂಪ್ರದಾಯಿಕ ಭಾಷಣವಿಲ್ಲದೇ ಕಲಾಪವು ಆರಂಭವಾಗಿತ್ತು ಎಂದು ವರದಿಯು ಉಲ್ಲೇಖಿಸಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅತಿ ಹೆಚ್ಚು, ಅಂದರೆ 41 ದಿನ ಕಲಾಪ ನಡೆದಿವೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಗಳ (40 ದಿನ) ಮತ್ತು ಕರ್ನಾಟಕ (39 ದಿನ) ಇವೆ. ಆಂಧ್ರಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ವಿಧಾನಸಭೆಗಳ ಕಲಾಪ 20 ದಿನಗಳಿಗಿಂತ ಕಡಿಮೆ ಅವಧಿ ನಡೆದಿವೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಉತ್ತರಾಖಂಡದಲ್ಲಿ ಅಧಿವೇಶನವು 10 ದಿನಗಳಿಗಿಂತ ಕಡಿಮೆ ನಡೆದಿದೆ ಎಂದು ವರದಿ ಪ್ರಸ್ತಾಪಿಸಿದೆ.
ಕಡಿಮೆ ಅವಧಿಯ ಕಲಾಪ ಗರಿಷ್ಠ ಮಸೂದೆಗಳಿಗೆ ಅಸ್ತು
ರಾಜ್ಯ ಶಾಸನಸಭೆಗಳು ಕಲಾಪವನ್ನು ನಡೆಸಿದ ಅವಧಿ ಕಡಿಮೆಯಿದ್ದರೂ 500ಕ್ಕೂ ಹೆಚ್ಚು ಮಸೂದೆಗಳು ಅಂಗೀಕಾರವಾಗಿವೆ. 53 ಲಕ್ಷ ಕೋಟಿಗೂ ಹೆಚ್ಚು ಗಾತ್ರದ ಬಜೆಟ್‌ಗೆ ಅಂಗೀಕಾರ ನೀಡಿದ್ದವು. 2023ನೇ ಸಾಲಿನಲ್ಲಿ ರಾಜ್ಯ ಶಾಸನಸಭೆಗಳಲ್ಲಿ ಮಂಡನೆಯಾದ ಮಸೂದೆಗಳ ಪೈಕಿ ಶೇ 44ರಷ್ಟು ಮಂಡನೆಯಾದ ಒಂದೇ ದಿನದಲ್ಲಿ ಅಂಗೀಕಾರಗೊಂಡಿವೆ. ಗುಜರಾತ್ ಜಾರ್ಖಂಡ್ ಮಿಜೋರಾಂ ಪುದುಚೇರಿ ಪಂಜಾಬ್ ರಾಜ್ಯಗಳ ವಿಧಾನಸಭೆಗಳಲ್ಲಿ ಮಸೂದೆಗಳನ್ನು ಅವು ಮಂಡನೆಯಾದ ದಿನ ಅಥವಾ ಮಾರನೇ ದಿನವೇ ಅಂಗೀಕರಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ಕೇರಳ ಮತ್ತು ಮೇಘಾಲಯ ವಿಧಾನಸಭೆಗಳಲ್ಲಿ ಶೇ 90ರಷ್ಟು ಮಸೂದೆಗಳು ಮಂಡನೆಯಾದ ಐದು ದಿನಗಳ ತರುವಾಯ ಅಂಗೀಕಾರಗೊಂಡಿವೆ. ಅಂಗೀಕಾರಗೊಂಡ ಬಳಿಕ ಶೇ 59ರಷ್ಟು ಮಸೂದೆಗಳಿಗೆ ತಿಂಗಳ ಅವಧಿಯಲ್ಲಿ ಆಯಾ ರಾಜ್ಯಗಳ ರಾಜ್ಯಪಾಲರ ಅನುಮೋದನೆ ದೊರೆತಿವೆ. ಬಿಹಾರ ಗುಜರಾತ್ ಹರಿಯಾಣ ಉತ್ತರ ಪ್ರದೇಶಗಳಲ್ಲಿ ಮಸೂದೆಗಳು ಅಂಗೀಕಾರಗೊಂಡ ತಿಂಗಳಲ್ಲಿಯೇ ರಾಜ್ಯಪಾಲರ ಅನುಮೋದನೆ ದೊರೆತಿದೆ. ಅಂಗೀಕಾರವಾಗಿ ಎರಡು ತಿಂಗಳಾದರೂ ಅನುಮೋದನೆ ಪಡೆಯದ ಮಸೂದೆಗಳ ಪ್ರಮಾಣ ಅಸ್ಸಾಂನಲ್ಲಿ ಶೇ 80ರಷ್ಟಿದ್ದರೆ ನಾಗಾಲ್ಯಾಂಡ್‌ನಲ್ಲಿ ಶೇ 57 ಜಾರ್ಖಂಡ್ ಪಶ್ಚಿಮ ಬಂಗಾಳದಲ್ಲಿ ಶೇ 50ರಷ್ಟಿದೆ. ಪಶ್ಚಿಮ ಬಂಗಾಳದಲ್ಲಿ ಮಸೂದೆ ಅಂಗೀಕಾರವಾದ ಸರಾಸರಿ 92 ದಿನ ಬಳಿಕ ರಾಜ್ಯಪಾಲರ ಅನುಮೋದನೆ ದೊರೆತಿದೆ. ಅಸ್ಸಾಂನಲ್ಲಿ 73 ದಿನ ನಂತರ ಜಾರ್ಖಂಡ್‌ನಲ್ಲಿ 72 ಕೇರಳದಲ್ಲಿ 67 ಹಿಮಾಚಲ ಪ್ರದೇಶದಲ್ಲಿ ಸರಾಸರಿ 55 ದಿನಗಳ ರಾಜ್ಯಪಾಲರ ಅನುಮೋದನೆ ದೊರೆತಿದೆ ಎಂದು ವರದಿ ಹೇಳಿದೆ.