ನವದೆಹಲಿ: ಕೆನಡಾದ ದಕ್ಷಿಣ ವ್ಯಾಂಕೋವರ್‌ನಲ್ಲಿ ಭಾರತ ಮೂಲಕ 24 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಕಾರಿನೊಳಗೆ ಶವ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
24 ವರ್ಷದ ಚಿರಾಗ್ ಆಂಟಿಲ್ ಎಂಬಾತ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯರು ಗುಂಡೇಟಿನ ಶಬ್ದ ಕೇಳಿದ್ದಾಗಿ ವರದಿಯಾಗಿದೆ ಎಂದು ವ್ಯಾಂಕೋವರ್ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ನಡೆದಿರುವ ಈ ಹತ್ಯೆಯ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
'ಏಪ್ರಿಲ್ 12 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಪೂರ್ವ 55ನೇ ಅವೆನ್ಯೂ ಮತ್ತು ಮುಖ್ಯ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ಗುಂಡಿನ ಶಬ್ದವನ್ನು ಕೇಳಿದ್ದಾರೆ. ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ 24 ವರ್ಷದ ಚಿರಾಗ್ ಆಂಟಿಲ್ ಎಂಬಾತ ಕಾರಿನೊಳಗೆ ಮೃತಪಟ್ಟಿರುವುದು ಕಂಡುಬಂದಿದೆ. ಈ ಸಂಬಂಧ ಯಾರನ್ನೂ ಬಂಧಿಸಿಲ್ಲ ಮತ್ತು ಮುಂದಿನ ತನಿಖೆ ನಡೆಯುತ್ತಿದೆ ಎಂದರು.
ಶನಿವಾರ ಸಂಜೆ, ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಕ್ಸ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, 'ವ್ಯಾಂಕೋವರ್‌ನಲ್ಲಿ ವಾಸಿಸುವ ಭಾರತೀಯ ಪ್ರಜೆ ಚಿರಾಗ್ ಆಂಟಿಲ್ ಅವರನ್ನು ಗುಂಡಿಕ್ಕಿ ಕೊಂದಿರುವುದು ಬಹಳ ದುಃಖದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಗಾಗಿ ರಾಯಭಾರ ಕಚೇರಿಯು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದೆ' ಎಂದು ಹೇಳಿದೆ.