ಕೋಝಿಕ್ಕೋಡ್: ಕೇರಳದಲ್ಲಿನ ಚುನಾವಣಾ ಪ್ರಚಾರದಲ್ಲಿನ ತಮ್ಮ ಭಾಷಣಗಳಲ್ಲಿ ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಕೇರಳ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಪಾಲಿಟ್ ಬ್ಯೂರೊ ಸದಸ್ಯರಾದ ಪಿಣರಾಯಿ ವಿಜಯನ್ ದಾಳಿ ನಡೆಸುತ್ತಿಲ್ಲ ಎಂದು ಸೋಮವಾರ ಕಾಂಗ್ರೆಸ್ ನಾಯಕ ಹಾಗೂ ವಯನಾಡ್ ಲೋಕಸಭಾ ಕ್ಷೇತ್ರದ ಐಕ್ಯ ಪ್ರಜಾಸತ್ತಾತ್ಮಕ ರಂಗದ ಅಭ್ಯರ್ಥಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಅದರ ಬದಲು ಚುನಾವಣಾ ಪ್ರಚಾರಗಳಲ್ಲಿ ಪಿಣರಾಯಿ ವಿಜಯನ್ ನಿರಂತರವಾಗಿ ನನ್ನ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕೋಝಿಕ್ಕೋಡ್ ಸಮುದ್ರ ತೀರದಲ್ಲಿ ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ನನ್ನ ಪ್ರಶ್ನೆಯೆಂದರೆ, ಬಿಜೆಪಿಯೇಕೆ ಕೇರಳ ಮುಖ್ಯಮಂತ್ರಿ ವಿರುದ್ಧ ದಾಳಿ ನಡೆಸುತ್ತಿಲ್ಲ? ಅವರೇಕೆ ಅವರ ನಿವಾಸ ಹಾಗೂ ಮುಖ್ಯಮಂತ್ರಿ ಹುದ್ದೆಯನ್ನು ಕಿತ್ತುಕೊಳ್ಳುತ್ತಿಲ್ಲ? ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿಲ್ಲ ಅಥವಾ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಡಿಸುತ್ತಿಲ್ಲ? ಇಷ್ಟಕ್ಕೂ ಇಬ್ಬರು ಮುಖ್ಯಮಂತ್ರಿಗಳನ್ನು ಬಿಜೆಪಿ ಜೈಲಿಗೆ ಹಾಕಿದೆ. ನನ್ನ ಎರಡನೆ ಪ್ರಶ್ನೆಯೆಂದರೆ, ಬಿಜೆಪಿಯು ಸಂವಿಧಾನವನ್ನು ನಾಶ ಮಾಡುವಾಗ, ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುವಾಗ, ಸಾಂವಿಧಾನಿಕ ಸಂಸ್ಥೆಗಳನ್ನು ನಾಶಗೊಳಿಸುತ್ತಿರುವಾಗ ಹಾಗೂ ಭಾರತವನ್ನು ವಿಭಜಿಸುತ್ತಿರುವಾಗ ಕೇರಳ ಮುಖ್ಯಮಂತ್ರಿಯು ನನ್ನ ಮೇಲೇಕೆ ದಿನದ 24 ಗಂಟೆಯೂ ದಾಳಿ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
"ಅವರು ನನ್ನ ವಿರುದ್ಧ ದಾಳಿ ನಡೆಸುತ್ತಿರುವುದಕ್ಕೆ ನಾನು ಸಂತಸಗೊಂಡಿದ್ದೇನೆ. ಆದರೆ, ನೀವು ಬಿಜೆಪಿ, ಮಾನ್ಯ ಮೋದಿ ಹಾಗೂ ಆರೆಸ್ಸೆಸ್ ವಿರುದ್ಧ ದಾಳಿ ನಡೆಸಲೂ ಕೆಲ ಸಮಯವನ್ನು ವಿನಿಯೋಗಿಸಬೇಕು" ಎಂದು ಅವರು ವ್ಯಂಗ್ಯವಾಗಿ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ, ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಹಾಗೂ ಸಿಪಿಐ ಪಕ್ಷದ ಅಭ್ಯರ್ಥಿ ಅನ್ನಿ ರಾಜಾ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಕುರಿತು ಎಪ್ರಿಲ್ 1ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದರು. ಬಿಜೆಪಿಯ ವಿರುದ್ಧ ರಾಹುಲ್ ಗಾಂಧಿ ಸಕ್ರಿಯವಾಗಿ ಪ್ರಚಾರ ನಡೆಸುತ್ತಿಲ್ಲ ಎಂದೂ ಅವರು ಆರೋಪಿಸಿದ್ದರು.