ನವದೆಹಲಿ: ಹೃದಯ ಬಡಿತವು ದಿಢೀರನೇ ಏರುಪೇರಾಗುವ ಮೂವತ್ತು ನಿಮಿಷಗಳ ಮೊದಲೇ ಅಪಾಯದ ಸೂಚನೆ ನೀಡುವ ಕೃತಕ ಬುದ್ಧಿಮತ್ತೆ (AI) ತಂತ್ರಾಂಶವನ್ನು ತಜ್ಞರು ಅಭಿವೃದ್ಧಿಪಡಿಸಿದ್ದಾರೆ.
'ಸಾಮಾನ್ಯ ಹೃದಯ ಬಡಿತ ಹಾಗೂ ಅನಿಯಂತ್ರಿತ ಹೃದಯ ಬಡಿತದ ನಡುವಿನ ವ್ಯತ್ಯಾಸವನ್ನು ಈ ತಂತ್ರಾಂಶವು ಶೇ 80ರಷ್ಟು ನಿಖರವಾಗಿ ಪತ್ತೆ ಮಾಡಲಿದೆ.
'ಈ ತಂತ್ರಾಂಶವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿಕೊಳ್ಳಬಹುದು. ಸ್ಮಾರ್ಟ್‌ವಾಚ್ ದಾಖಲಿಸುವ ಮಾಹಿತಿ ಕುರಿತು ಸ್ಮಾರ್ಟ್‌ಫೋನ್‌ನಲ್ಲಿರುವ ತಂತ್ರಾಶವು ಅದನ್ನು ಸಂಸ್ಕರಿಸಿ, ಅಧ್ಯಯನ ನಡೆಸಿ, ನಿಖರ ಮಾಹಿತಿ ನೀಡಲಿದೆ. ಹೀಗೆ ಮುಂಚಿತವಾಗಿಯೇ ಸಿಗುವ ಮಾಹಿತಿ ಆಧರಿಸಿ, ವ್ಯಕ್ತಿ ತಮ್ಮ ಹೃದಯ ಆರೈಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ' ಎಂದು ಪ್ಯಾಟರ್ನ್ಸ್ ಎಂಬ ಸಂಶೋಧನಾ ಲೇಖನಗಳ ನಿಯತಕಾಲಿಕೆಯಲ್ಲಿ ತಜ್ಞರು ಹೇಳಿದ್ದಾರೆ.
'ಇದಕ್ಕಾಗಿ ಚೀನಾದ ವುಹಾನ್‌ನಲ್ಲಿರುವ ಆಸ್ಪತ್ರೆಯಲ್ಲಿ 350 ವ್ಯಕ್ತಿಗಳ 24 ಗಂಟೆಗಳ ಮಾಹಿತಿಯನ್ನು ನುರಿತ ತಜ್ಞರ ತಂಡ ದಾಖಲಿಸಿದೆ. ಈ ತಂತ್ರಾಂಶಕ್ಕೆ WARN ಎಂದು ಹೆಸರಿಡಲಾಗಿದೆ. ಹಿಂದಿನ ಮಾಹಿತಿಯನ್ನು ಆಧರಿಸಿ, ಆಳವಾದ ಅಧ್ಯಯನ ನಡೆಸುವ ಈ ತಂತ್ರಾಂಶವು ನಿಖರ ದಾಖಲೆ ನೀಡಲಿದೆ' ಎಂದಿದ್ದಾರೆ.
'ಹಲವು ಹಂತಗಳಲ್ಲಿ ಏರಿಳಿಕೆಯಾಗುವ ವ್ಯಕ್ತಿಯ ಹೃದಯ ಬಡಿತವನ್ನು ಅರ್ಥೈಸಿಕೊಳ್ಳುವ ಈ ತಂತ್ರಾಂಶವು, ಹೃದಯದ ಅನಿಯಂತ್ರಿತ ಏರಿಳಿತ ಹಾಗೂ ಅದರಿಂದ ಉಂಟಾಗಬಹುದಾದ ಸಮಸ್ಯೆಯನ್ನೂ ಅಷ್ಟೇ ಕರಾರುವಕ್ಕಾಗಿ ಗ್ರಹಿಸಲಿದೆ. ಸರಾಸರಿಯಾಗಿ 30 ನಿಮಿಷಗಳ ಮೊದಲೇ ಎಚ್ಚರಿಕೆ ನೀಡುವ ಸಾಮರ್ಥ್ಯ ಇದಕ್ಕಿದೆ' ಎಂದು ಲ್ಯಾಕ್ಸಾಂಬರ್ಗ್ ವಿಶ್ವವಿದ್ಯಾಲಯದ ಜಾರ್ಜ್ ಗೋಕಾಲ್ವ್ಸ್ ತಿಳಿಸಿದ್ದಾರೆ.
'ಹೃದಯ ಸಂಬಂಧಿತ ಸಮಸ್ಯೆ ಇರುವವರು ಇದನ್ನು ನಿಯಮಿತವಾಗಿ ಬಳಸಬಹುದು. ಆ ಮೂಲಕ ರಿಯಲ್ ಟೈಮ್‌ನಲ್ಲಿ ಲಭ್ಯವಾಗುವ ಮಾಹಿತಿಯನ್ನು ಸಂಸ್ಕರಿಸಿ, ನಿಖರ ಎಚ್ಚರಿಕೆ ನೀಡಲು ಸಾಧ್ಯವಾಗಿದೆ' ಎಂದು ಎಲ್‌ಸಿಎಸ್‌ಬಿ ಸಂಶೋಧಕ ಅರ್ಥುರ್ ಮೊಂಟನಾರಿ ತಿಳಿಸಿದ್ದಾರೆ.