ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಮತ್ತು ಪೂರ್ವದ ರಾಜ್ಯಗಳಲ್ಲಿ ಕಳೆದ ಬಾರಿಗಿಂತ ಹೆಚ್ಚು ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿಯು 300 ಸ್ಥಾನಗಳ ಗಡಿ ದಾಟುವ ಸಾಧ್ಯತೆಯಿದೆ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೇಳಿದರು.
ಪಿಟಿಐ ಸಂಪಾದಕರ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕಟ್ಟಿಹಾಕಲು ತಮಗೆ ಲಭಿಸಿದ ಕೆಲವೊಂದು ಅತ್ಯುತ್ತಮ ಅವಕಾಶಗಳನ್ನು ವಿರೋಧ ಪಕ್ಷಗಳು 'ಸೋಮಾರಿತನ' ಮತ್ತು ತಪ್ಪು ತಂತ್ರಗಾರಿಕೆಯಿಂದ ಹಾಳುಮಾಡಿಕೊಂಡಿವೆ ಎಂದು ಅಭಿಪ್ರಾಯಪಟ್ಟರು.
'ಬಿಜೆಪಿಯು ತೆಲಂಗಾಣದಲ್ಲಿ ಅತಿದೊಡ್ಡ ಅಥವಾ ಎರಡನೇ ಅತಿದೊಡ್ಡ ಪಕ್ಷ ಆಗಬಹುದು. ಒಡಿಶಾದಲ್ಲಿ ಅವರು ಅತ್ಯಧಿಕ ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿಯು ಪಶ್ಚಿಮ ಬಂಗಾಳದಲ್ಲೂ ನಂ.1 ಪಕ್ಷ ಎನಿಸಿಕೊಳ್ಳಲಿದೆ. ತಮಿಳುನಾಡಿನಲ್ಲಿ ಅವರ ಮತಗಳಿಕೆ ಪ್ರಮಾಣ ಎರಡಂಕಿ ದಾಟಲಿದೆ' ಎಂದು ಭವಿಷ್ಯ ನುಡಿದರು. ಆದರೆ ಬಿಜೆಪಿಯವರು ಹೇಳುತ್ತಿರುವಂತೆ 370 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಕಡಿಮೆ ಎಂದರು.
'ಬಿಜೆಪಿಯು ತನ್ನ ಭದ್ರಕೋಟೆ ಎನಿಸಿರುವ ಉತ್ತರ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಕಳೆದ ಬಾರಿ ಗೆದ್ದ ಸೀಟುಗಳಲ್ಲಿ ಕನಿಷ್ಠ 100 ಸೀಟುಗಳನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲು ಯಶಸ್ವಿಯಾದರಷ್ಟೇ ಎನ್‌ಡಿಎಗೆ ಒತ್ತಡ ಎದುರಾಗಲಿದೆ. ಆದರೆ ಅಂತಹ ಸಾಧ್ಯತೆ ತೀರಾ ಕಡಿಮೆ' ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮೇಲಿಂದ ಮೇಲೆ ದಕ್ಷಿಣ ಭಾರತ ಪ್ರವಾಸ ಮಾಡಿ, ಜನರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.
'ಪ್ರಧಾನಿ ಅವರು ಕಳೆದ ಐದು ವರ್ಷಗಳಲ್ಲಿ ತಮಿಳುನಾಡಿಗೆ ಎಷ್ಟು ಸಲ ಭೇಟಿ ಕೊಟ್ಟಿದ್ದಾರೆ ಮತ್ತು ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರು ಎಷ್ಟು ಸಲ ಭೇಟಿ ಕೊಟ್ಟಿದ್ದಾರೆ ಎಂಬುದನ್ನು ಲೆಕ್ಕಹಾಕಿ ನೋಡಿ' ಎಂದರು.
'ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಹೋರಾಡುತ್ತಿರುವ ನೀವು (ಕಾಂಗ್ರೆಸ್‌ನವರು) ಮಣಿಪುರ, ಮೇಘಾಲಯದಲ್ಲಿ ಪ್ರವಾಸ ಮಾಡಿದರೆ ಏನು ಲಾಭ' ಎಂದು ಹೆಸರು ಉಲ್ಲೇಖಿಸಿದೆಯೇ ರಾಹುಲ್ ಗಾಂಧಿ ಅವರ ನಿಲುವನ್ನು ಪ್ರಶ್ನಿಸಿದರು.
'ಅವಕಾಶ ಕೈಚೆಲ್ಲಿದ ವಿರೋಧ ಪಕ್ಷಗಳು'
'2020 ರಲ್ಲಿ ಕೋವಿಡ್ ಬಳಿಕದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಸಿದಿತ್ತು. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತ್ತು. ಈ ವೇಳೆ ಮೋದಿ ಅವರನ್ನು ಇನ್ನಷ್ಟು ಒತ್ತಡಕ್ಕೆ ತಳ್ಳುವ ಬದಲು ವಿರೋಧ ಪಕ್ಷದವರು ತಮ್ಮ ತಮ್ಮ ಮನೆಗಳಲ್ಲೇ ಕುಳಿತುಕೊಂಡರು. ಇದರಿಂದ ಪ್ರಧಾನಿಗೆ ರಾಜಕೀಯ ಪುನರಾಗಮನ ಮಾಡಲು ಸಾಧ್ಯವಾಗಿದೆ. ಚೆನ್ನಾಗಿ ಆಡುವ ಬ್ಯಾಟರ್‌ನ ಕ್ಯಾಚ್‌ಗಳನ್ನು ಕೈಚೆಲ್ಲುತ್ತಾ ಇದ್ದರೆ ಆತ ಶತಕ ಹೊಡೆಯುತ್ತಾನೆ' ಎಂದು ಪ್ರಶಾಂತ್ ಕಿಶೋರ್ ಹೇಳಿದರು.