ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ 'ಸಿ-ವೋಟರ್' ತನ್ನ ಸಮೀಕ್ಷೆ ಫಲಿತಾಂಶವನ್ನು ಇಂದು (ಬುಧವಾರ) ಬಿಡುಗಡೆ ಮಾಡಿದೆ.
ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ 'ಎನ್‌ಡಿಎ' ಮೈತ್ರಿಕೂಟ ಗೆಲುವು ಸಾಧಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಅವಧಿಗೆ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಅಧಿಕಾರಕ್ಕೆ ಬರಲಿದ್ದಾರೆ ಎಂದು ಸಮೀಕ್ಷೆ ನುಡಿದಿದೆ.
ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ 'ಎನ್‌ಡಿಎ' ಮೈತ್ರಿಕೂಟವು 373 ಸ್ಥಾನಗಳನ್ನು ಗೆಲ್ಲಲಿದ್ದು, ಶೇಕಡ 46.6ರಷ್ಟು ಮತಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಮತ ಹಂಚಿಕೆ ಪ್ರಮಾಣ ಶೇ 45.1ರಷ್ಟಿತ್ತು. ಈ ಬಾರಿ ಶೇ 46.6ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಈ ಬಾರಿ ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು 155 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಮತ ಹಂಚಿಕೆ ಪ್ರಮಾಣ ಶೇ 39.8ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. 2019ರಲ್ಲಿ ಈ ಪಕ್ಷಗಳು ಶೇ 36.6ರಷ್ಟು ಮತಗಳನ್ನು ಪಡೆದಿದ್ದವು.
ಆಂಧ್ರಪ್ರದೇಶ, ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟವು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ಗುಜರಾತ್‌ನಲ್ಲಿ ಎನ್‌ಡಿಎ ತನ್ನ ಹಿಡಿತ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟ 23 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.