ಕೋಲ್ಕತ್ತ: 'ಚಂದ್ರಯಾನ-3'ರ ಯಶಸ್ಸು ಕೇವಲ ಬಾಹ್ಯಾಕಾಶ ಕುರಿತ ಅಧ್ಯಯನಕ್ಕೆ ಸೀಮಿತವಾಗದು. ಎಂಜಿನಿಯರಿಂಗ್ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವಲ್ಲಿ ಆಸಕ್ತಿ ಮೂಡಿಸುವುದು ಹಾಗೂ ಕ್ರಿಯಾಶೀಲವಾದ ವೈಜ್ಞಾನಿಕ ಸಮುದಾಯವೊಂದನ್ನು ಪೋಷಿಸುವುದೇ ಈ ಕಾರ್ಯಕ್ರಮದ ತಿರುಳಾಗಿದೆ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.
ಪಿಟಿಐ ಜೊತೆ ಮಾತನಾಡಿರುವ ಅವರು, 'ಅಂತರಿಕ್ಷ ಅನ್ವೇಷಣೆಗೆ ಉತ್ತೇಜನ ನೀಡುವ ಜೊತೆಗೆ ಬಾಹ್ಯಾಕಾಶ ಕ್ಷೇತ್ರಕ್ಕೆ ನಂಟಿರುವ ಉದ್ದಿಮೆಗಳನ್ನು ಬೆಳೆಸುವುದು ಕೂಡ ಮುಖ್ಯ' ಎಂದು ಪ್ರತಿಪಾದಿಸಿದ್ದಾರೆ.
'ಬಾಹ್ಯಾಕಾಶ ಕ್ಷೇತ್ರ ಮಾತ್ರವಲ್ಲ, ವಿಜ್ಞಾನ ಮತ್ತು ತಂತ್ರಜ್ಞಾದಲ್ಲಿ ಸಂಶೋಧನೆಯಲ್ಲಿ ತೊಡಗುವಂತೆ ಯುವ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಬೇಕಿದೆ. ಇದಕ್ಕಾಗಿ, ಈ ಕ್ಷೇತ್ರಗಳಲ್ಲಿ ಎದುರಾಗುವ ಸವಾಲುಗಳು ಹಾಗೂ ಬೆಳವಣಿಗೆಗಳನ್ನು ವಿವರಿಸುವ ಮೂಲಕ ಯುವ ಪೀಳಿಗೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಚಂದ್ರಯಾನ-3 ಪ್ರಮುಖಪಾತ್ರ ವಹಿಸುತ್ತದೆ' ಎಂದು ಹೇಳಿದ್ದಾರೆ.
'ಐಟಿ ಕ್ಷೇತ್ರದಲ್ಲಿ ದೇಶ ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಗಮನಾರ್ಹ ಪ್ರಮಾಣದ ಉದ್ಯೋಗದಾತರನ್ನು ಹೊಂದಿದ್ದೇವೆ. ಈಗ ಎಲೆಕ್ಟ್ರಾನಿಕ್ಸ್ ಕ್ಷೇತ್ರದತ್ತ ನಾವು ಮುಖ ಮಾಡಿದ್ದೇವೆ. ಅದರಲ್ಲೂ, ಹಾರ್ಡ್‌ವೇರ್ ಸೃಷ್ಟಿ ಮತ್ತು ಪೂರೈಕೆಯತ್ತ ನಿಧಾನವಾಗಿ ಪ್ರಗತಿ ಸಾಧಿಸುತ್ತಿರುವುದನ್ನು ಕಾಣಬಹುದಾಗಿದೆ' ಎಂದು ಸೋಮನಾಥ್ ಹೇಳಿದರು.
ಭಾರತವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವತ್ತ ಕೆಲಸ ಮಾಡುತ್ತಿದೆ. ಜಪಾನ್, ಜರ್ಮನಿ, ಆಸ್ಟ್ರೇಲಿಯಾ ಹಾಗೂ ಐರೋಪ್ಯ ಒಕ್ಕೂಟದ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದೂ ಹೇಳಿದರು.