ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ದೇಶದಲ್ಲಿ 75 ವರ್ಷಗಳ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ದಾಖಲಾದ ಅತಿ ಹೆಚ್ಚು ದಾಖಲೆರಹಿತ ನಗದು ಮತ್ತು ವಸ್ತುಗಳನ್ನು ಈ ಬಾರಿ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
18ನೇ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇದೇ ಶುಕ್ರವಾರ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ದೇಶಾದ್ಯಂತ ಇದುವರೆಗೆ 4,650 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಗ-ನಾಣ್ಯ,ದಾಖಲೆರಹಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮೊತ್ತವು 2019 ರ ಲೋಕಸಭಾ ಚುನಾವಣೆಯ ಇಡೀ ಪ್ರಕ್ರಿಯೆಯಲ್ಲಿ ವಶಪಡಿಸಿಕೊಳ್ಳಲಾದ ಮೊತ್ತಕ್ಕಿಂತ 3,475 ಕೋಟಿ ರೂಪಾಯಿ ಹೆಚ್ಚಾಗಿದೆ.
ಹೀಗೆ ವಶಪಡಿಸಿಕೊಂಡ ಮೊತ್ತದಲ್ಲಿ ಶೇಕಡಾ 45ರಷ್ಟು ಮಾದಕ ದ್ರವ್ಯಗಳು ಮತ್ತು ಮಾದಕವಸ್ತುಗಳ (ರೂ. 2,068.10 ಕೋಟಿ) ಪೂರೈಕೆಗೆ ಬಳಕೆಯಾದವುಗಳಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮಾದಕ ವಸ್ತುಗಳ ಜೊತೆಗೆ ಚುನಾವಣಾ ಆಯೋಗ 395.39 ಕೋಟಿ ರೂಪಾಯಿ ನಗದು, 489.31 ಕೋಟಿ ಮೌಲ್ಯದ ಮದ್ಯ, .562.10 ಕೋಟಿ ರೂಪಾಯಿ ಮೌಲ್ಯದ ಅಮೂಲ್ಯ ಲೋಹ ಮತ್ತು .1,142.49 ಕೋಟಿ ಮೌಲ್ಯದ ಉಚಿತ ವಸ್ತುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.