ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೀವ್ರ ನಿಗಾ ವಹಿಸಿರುವ ಅಧಿಕಾರಿಗಳು, ದೇಶದಾದ್ಯಂತ ನಗದು ಸೇರಿದಂತೆ ಸುಮಾರು ₹ 4,650 ಕೋಟಿಗೂ ಅಧಿಕ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ₹ 2,000 ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ಸಹ ಇದರಲ್ಲಿ ಸೇರಿವೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ.
2024ರ ಮಾರ್ಚ್ 1ರಿಂದ ಈವರೆಗೆ ವಶಪಡಿಸಿಕೊಳ್ಳಲಾಗಿರುವ ವಸ್ತುಗಳ ಮೌಲ್ಯವು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಂಡದ್ದಕ್ಕಿಂತಲೂ ಅಧಿಕವಾಗಿದೆ. ಕಳೆದ ಚುನಾವಣೆ ವೇಳೆ ಸುಮಾರು ₹ 3,475 ಕೋಟಿ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಆಯೋಗ ಮಾಹಿತಿ ನೀಡಿದೆ.
ಮಾರ್ಚ್ 1ರಿಂದ ಈವರೆಗೆ ನಿತ್ಯ ಸರಾಸರಿ ₹ 100 ಕೋಟಿ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದಿರುವ ಒಟ್ಟು ₹ 4,658 ಕೋಟಿ ಮೊತ್ತದ ವಸ್ತುಗಳ ಪೈಕಿ ನಗದು ಪ್ರಮಾಣ ₹ 395 ಕೋಟಿ ಹಾಗೂ ಮದ್ಯದ ಪ್ರಮಾಣ ₹ 489 ಕೋಟಿ. ಉಳಿದಂತೆ ಶೇ 45ರಷ್ಟು (₹ 2,069 ಕೋಟಿ) ಮಾದಕವಸ್ತುಗಳು ಎಂದು ವಿವರಿಸಿದ್ದಾರೆ.
ಚುನಾವಣಾ ಆಯೋಗವು ಮಾರ್ಚ್ 16ರಂದು ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಹಾಗೂ ಜೂನ್ 1ರಂದು ಕೊನೇ ಹಂತದ ಮತದಾನವಾಗಲಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.