ನವದೆಹಲಿ: ಲೋಕಸಭೆಗೆ ಶೇ 40ರಷ್ಟು ಸಂಸದರನ್ನು ಕಳುಹಿಸುವ ಐದು ರಾಜ್ಯಗಳನ್ನು ಗೆದ್ದವರು ದೆಹಲಿ ಗದ್ದುಗೆಗೆ ಏರುತ್ತಾರೆ ಎಂಬ ಪ್ರತೀತಿ ಇದೆ. ಈ ಹಿಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ಈ ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಸಾಧನೆ ಪೇಲವವಾಗಿತ್ತು. ಈ ಸಲ 'ಕೈ' ಪಾಳಯವು ಈ ರಾಜ್ಯಗಳಲ್ಲಿ 65 ಕ್ಷೇತ್ರಗಳಲ್ಲಷ್ಟೇ ಅದೃಷ್ಟ ಪರೀಕ್ಷೆಗೆ ಇಳಿದಿದೆ.
ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ತಮಿಳುನಾಡಿನಲ್ಲಿ ಒಟ್ಟು 249 ಲೋಕಸಭಾ ಕ್ಷೇತ್ರಗಳಿವೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ, ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳು, ಬಿಹಾರದಲ್ಲಿ ಆರ್‌ಜೆಡಿ, ಮಹಾರಾಷ್ಟ್ರದಲ್ಲಿ ಶಿವಸೇನಾ (ಠಾಕ್ರೆ ಬಣ) ಹಾಗೂ ಎನ್‌ಸಿಪಿ (ಶರದ್ ಪವಾರ್ ಬಣ) ಹಾಗೂ ತಮಿಳುನಾಡಿನಲ್ಲಿ ಡಿಎಂಕೆ ಜತೆಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಮೈತ್ರಿಯ ಕಿರಿಯ ಪಾಲುದಾರ. ಹೀಗಾಗಿ, ಪಕ್ಷವು ಸ್ಪರ್ಧಿಸಿರುವ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ.
ಆರು ರಾಜ್ಯಗಳಲ್ಲಿ ನೇರ ಹಣಾಹಣಿ: 2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರು ರಾಜ್ಯಗಳಲ್ಲಿ ನೇರ ಹಣಾಹಣಿ ಏರ್ಪಟ್ಟಿತ್ತು. ಮಧ್ಯ ಪ್ರದೇಶ (29 ಕ್ಷೇತ್ರಗಳು), ಗುಜರಾತ್ (26), ರಾಜಸ್ಥಾನ (25), ಛತ್ತೀಸಗಢ (11), ಉತ್ತರಾಖಂಡ (5) ಹಾಗೂ ಹಿಮಾಚಲ ಪ್ರದೇಶದಲ್ಲಿ (4) 100 ಕ್ಷೇತ್ರಗಳಿವೆ. ಕಳೆದ ಬಾರಿ ಕಮಲ ಪಾಳಯ 97ರಲ್ಲಿ ವಿಜಯಶಾಲಿಯಾಗಿತ್ತು. ಕಾಂಗ್ರೆಸ್ ಮೂರಕ್ಕೆ ಸಮಾಧಾನಪಟ್ಟಿತ್ತು. ಅಸ್ಸಾಂ ಹಾಗೂ ಹರಿಯಾಣದಲ್ಲಿ ಯಾವುದೇ ಪಕ್ಷದ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿಲ್ಲ. ಆದರೆ, ಬಿಜೆಪಿಯು ಪ್ರಾದೇಶಿಕ ಪಕ್ಷಗಳ ಜತೆಗೆ ದೋಸ್ತಿ ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷ ಈ ಬಾರಿ ರಣತಂತ್ರವನ್ನು ಬದಲಿಸಿಕೊಂಡಿದೆ. ಈ ರಾಜ್ಯಗಳಲ್ಲಿ ಸಣ್ಣ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಒಂದಿಷ್ಟು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಇದರಿಂದಾಗಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದಲ್ಲಿ ಬಿಜೆಪಿ ಪ್ರಬಲ ಸ್ಪರ್ಧೆ ನೀಡಬಹುದು ಎಂಬ ನಿರೀಕ್ಷೆಯಲ್ಲಿ 'ಕೈ' ಪಾಳಯ ಇದೆ.
ರಾಯ್‌ಬರೇಲಿ
ಪ್ರಿಯಾಂಕಾ ನಿರಾಸಕ್ತಿ ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಳಾಗಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಹಿರಿಯ ನಾಯಕರಿಗೆ ತಿಳಿಸಿದ್ದಾರೆ. ಅವರ ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮುಂದುವರಿಸಿದ್ದಾರೆ. ರಾಯ್‌ಬರೇಲಿ ಹಾಗೂ ಅಮೇಠಿ ಲೋಕಸಭಾ ಕ್ಷೇತ್ರಗಳಿಗೂ ನೆಹರೂ ಗಾಂಧಿ ಕುಟುಂಬಕ್ಕೂ ಎಲ್ಲಿಲ್ಲದ ನಂಟು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ರಾಯ್‌ಬರೇಲಿಯಲ್ಲಿ ಗೆದ್ದಿದ್ದರು. ಪುತ್ರ ರಾಹುಲ್ ಗಾಂಧಿ ಅವರು ಅಮೇಠಿಯಲ್ಲಿ ಸೋತಿದ್ದರು. ಈ ಸಲ ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ತೊಡೆ ತಟ್ಟಲು ರಾಹುಲ್ ಸಜ್ಜಾಗಿದ್ದಾರೆ. ಆದರೆ ರಾಯ್‌ಬರೇಲಿಯದ್ದೇ ಕಾಂಗ್ರೆಸ್‌ಗೆ ಸಮಸ್ಯೆ. ವಯಸ್ಸಿನ ಕಾರಣಕ್ಕೆ ಸೋನಿಯಾ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದರು. ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ರಾಯ್‌ಬರೇಲಿಯಲ್ಲಿ ಪ್ರಿಯಾಂಕಾ ಸ್ಪರ್ಧಿಸಬೇಕು ಎಂದು 'ಕೈ'ನಾಯಕರ ಇರಾದೆ. ಇದರಿಂದ ರಾಜ್ಯದ ಕೆಲವು ಕ್ಷೇತ್ರದಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಅವರ ಆಲೋಚನೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಿಯಾಂಕಾ ಬಿಲ್‌ಕುಲ್ ಒಪ್ಪುತ್ತಿಲ್ಲ.