ಕಾಸರಗೋಡು: ಚೆಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರಡ್ಕದ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಭಾರಿ ಪ್ರಮಾಣದಲ್ಲಿ ಮಾಲಿನ್ಯ ಸುರಿಯುತ್ತಿರುವುದನ್ನು ಅಪರಾಧ ತನಿಖೆ ಜಾರಿ ದಳ ಪತ್ತೆ ಹಚ್ಚಿದೆ. ಜಾಗದ ಮಾಲೀಕನಿಗೆ ಹಣ ನೀಡಿ, ವಿವಿಧ ಭಾಗಗಳಿಂದ ತಂದ ಮಾಲಿನ್ಯವನ್ನು ಇಲ್ಲಿ ಸುರಿಯುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮದುವೆ ಸಮಾರಂಭ, ವಿವಿಧ ಮನೆ ಮತ್ತು ಇತರ ಭಾಗಗಳಿಂದ ಸಂಗ್ರಹಗೊಳ್ಳುವ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಲಾಗಿದೆ.
ಕೆಲವು ಸಮಯದ ಹಿಂದೆ ಇಲ್ಲಿ ಶೌಚಗೃಹದ ತ್ಯಾಜ್ಯವನ್ನು ಕೂಡ ಸುರಿಯುತ್ತಿದ್ದರೆನ್ನಲಾಗಿದೆ. ಈ ಪ್ರದೇಶದಲ್ಲಿ ಮಾಲಿನ್ಯ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಭಾರಿ ದುರ್ವಾಸನೆಗೂ ಕಾರಣವಾಗಿತ್ತು. ಅಲ್ಲದೆ ವ್ಯಾಪಕ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿತ್ತು. ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯ ಸುರಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳದ ಮಾಲೀಕರಿಗೆ ಅಪರಾಧ ತನಿಖೆ ಜಾರಿ ದಳ 50,000 ರೂ ದಂಡ ವಿಧಿಸಿದೆ. ಮಾಲಿನ್ಯ ಸುರಿಯುವುದು ಮುಂದುವರಿದಲ್ಲಿ ದಂಡದ ಮೊತ್ತ ದುಪ್ಪಟ್ಟಾಗಲಿದೆ ಎಂದು ಅಪರಾಧ ತನಿಖೆ ದಳ ಅಧಿಕಾರಿಗಳು ತಿಳಿಸಿದ್ದಾರೆ. ಅಪರಾಧ ತನಿಖೆ ಜಾರಿ ದಳದ ಅಧಿಕಾರಿಗಳಾದ ಕೆ.ವಿ.ಮುಹಮ್ಮದ್ ಮದನಿ, ರಿಯಾಸ್, ಆರೋಗ್ಯ ನಿರೀಕ್ಷಕಿ ಕೆ.ರಶ್ಮಿ, ಇ.ಕೆ.ಫಾಸಿಲ್ ತಪಾಸಣೆಯಲ್ಲಿ ಭಾಗವಹಿಸಿದ್ದರು.