ಅಂಬಾಲ: ಪಂಜಾಬ್‌ನ ಪಟಿಯಾಲ ಜಿಲ್ಲೆಯ ಶಂಭು ರೈಲು ನಿಲ್ದಾಣದ ಬಳಿ ರೈತರು ಹಳಿಗಳ ಮೇಲೆ ಸತತ ನಾಲ್ಕನೇ ದಿನವೂ ಪ್ರತಿಭಟನೆ ಮುಂದುವರಿಸಿದ್ದಾರೆ. ಇದರಿಂದಾಗಿ ಅಂಬಾಲ-ಅಮೃತಸರ ಮಾರ್ಗದ 54 ರೈಲುಗಳ ಸಂಚಾರವನ್ನು ಶನಿವಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್-ಹರಿಯಾಣ ಗಡಿಯ ಶಂಭುವಿನಲ್ಲಿ ಸಾಗುವ ಅಂಬಾಲ-ಲೂಧಿಯಾನ-ಅಮೃತಸರ ಮಾರ್ಗದಲ್ಲಿ ಹಳಿಗಳ ಮೇಲೆ ರೈತರು ಬುಧವಾರ ಪ್ರತಿಭಟನೆ ಆರಂಭಿಸಿದ್ದರು. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಅವರ ಬಿಡುಗಡೆಗೆ ಒತ್ತಾಯಿಸಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.
ರೈತರ ಪ್ರತಿಭಟನೆಯಿಂದಾಗಿ 54 ರೈಲುಗಳ ಸಂಚಾರವನ್ನು ಇಂದು (ಶನಿವಾರ) ಸ್ಥಗಿತಗೊಳಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ ಸುಮಾರು 380 ರೈಲುಗಳ ಸಂಚಾರದ ಮೇಲೆ ಪ್ರತಿಭಟನೆಯ ಬಿಸಿ ತಟ್ಟಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
'ಸಂಯುಕ್ತ ಕಿಸಾನ್ ಮೋರ್ಚಾ' (ಎಸ್‌ಕೆಎಂ) ಹಾಗೂ 'ಕಿಸಾನ್ ಮಜ್ದೂರ್ ಮೋರ್ಚಾ' (ಕೆಎಂಎಂ) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಬಂಧಿತರ ಬಿಡುಗಡೆಯಾಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ರೈತ ನಾಯಕ ಸರವಣ್ ಸಿಂಗ್ ಪಂಧೇರ್ ಸ್ಪಷ್ಟಪಡಿಸಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಒದಗಿಸಲು ಕಾನೂನು ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಡುವ ಸಲುವಾಗಿ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆ ನಡೆಸಲು ಎಸ್‌ಕೆಎಂ ಹಾಗೂ ಕೆಎಂಎಂ ರೈತ ಸಂಘಟನೆಗಳು ಇತ್ತೀಚೆಗೆ ಕರೆ ನೀಡಿದ್ದವು.
ಅದರಂತೆ, ದೆಹಲಿಗೆ ಮೆರವಣಿಗೆ ಹೊರಟಿದ್ದ ರೈತ ಹೋರಾಟಗಾರರನ್ನು ಪಂಜಾಬ್, ಹರಿಯಾಣ ನಡುವಣ ಶಂಭು ಮತ್ತು ಖನೌರಿ ಗಡಿ ಕೇಂದ್ರದ ಬಳಿ ಭದ್ರತಾ ಪಡೆಗಳು ಫೆಬ್ರುವರಿ 13ರಂದು ತಡೆದಿವೆ. ಆಗಿನಿಂದಲೂ ರೈತರು ಅಲ್ಲಿಯೇ ಬೀಡುಬಿಟ್ಟಿದ್ದಾರೆ.