ನವದೆಹಲಿ: 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ಕುರಿತಂತೆ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಪರೀಕ್ಷೆ ಫಲಿತಾಂಶ ಪ್ರಕಟಿಸದಂತೆಯೂ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಪೀಠವು ಆದೇಶಿಸಿದೆ. ಈ ಕುರಿತಂತೆ ಎರಡು ವಾರಗಳಲ್ಲಿ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಮೂಲಕ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತ್ತು.
ಸರ್ಕಾರ ಪ್ರಕಟಿಸಿರುವ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಸೂಚಿಸಿತ್ತು. ಇದೀಗ, ಪರೀಕ್ಷೆ ನಡೆದು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.