ಗುವಾಹಟಿ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಭಾನುವಾರ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಜನಜೀವನಕ್ಕೆ ತೊಂದರೆ ಉಂಟಾಗಿದೆ. ಅಸ್ಸಾಂನಲ್ಲಿ ಆಲಿಕಲ್ಲುಸಹಿತ ಮಳೆಯಾಗಿದ್ದು, ನದಿಯಲ್ಲಿ ದೋಣಿ ಮಗುಚಿ ನಾಲ್ಕು ವರ್ಷ ವಯಸ್ಸಿನ ಮಗು ಸಾವಿಗೀಡಾಗಿದೆ.
ಅಸ್ಸಾಂ ಬಹುತೇಕ ಕಡೆಗಳಲ್ಲಿ ಭಾನುವಾರ ಸಂಜೆಯಿಂದ ಆಲಿಕಲ್ಲು ಸಹಿತ ಭಾರಿ ಮಳೆಯಾಗುತ್ತಿದೆ.
ಬಾಲಕಿಯ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಇನ್ನುಳಿದ ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಪಾರಾದರು ಎಂದು ಅವರು ಹೇಳಿದ್ದಾರೆ.
ರಾಜ್ಯದ ಹಲವೆಡೆ ಹಲವಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮನೆಗಳು, ಶಾಲೆಗಳು, ಅಂಗಡಿಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ರಕ್ಷಣಾ ಕಾರ್ಯಕ್ಕೆ ಅನುಕೂಲ ಮಾಡಿಕೊಡಿಕೊಡುವ ನಿಟ್ಟಿನಲ್ಲಿ ಡ್ರೋನ್‌ಗಳನ್ನು ಕಳುಹಿಸಲಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಸಿಇಒ ಜ್ಞಾನೇಂದ್ರ ದೇವ್ ತ್ರಿಪಾಠಿ ತಿಳಿಸಿದ್ದಾರೆ.
ಮರಗಳು ಉರುಳಿ ರಸ್ತೆ ಬಂದ್ ಆಗಿದ್ದರಿಂದ ಗುವಾಹಟಿ ಬಳಿಯ ಗರ್ಭಂಗ ಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿದ್ದ ಹಲವರು ಸೋಮವಾರ ಬೆಳಿಗ್ಗೆವರೆಗೆ ಅಲ್ಲಿಯೇ ಸಿಲುಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಕರೆ ಮಾಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.
ಐದು ದಿನ ಮಳೆ: ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಹವಾಮಾನ ಇಲಾಖೆಯು 'ಆರೆಂಜ್ ಅಲರ್ಟ್' (ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲು ಎಚ್ಚರಿಕೆ) ಘೋಷಿಸಿದೆ. ಮುಂದಿನ ಐದು ದಿನಗಳು ಅಸ್ಸಾಂ ಸೇರಿ ಈಶಾನ್ಯ ಭಾಗದ ಹಲವು ರಾಜ್ಯಗಳಲ್ಲಿ ಮಿಂಚು, ಗುಡುಗು ಸಹಿತ ಅಧಿಕದಿಂದ ಭಾರಿ ಮಳೆಯಾಗಲಿದೆ. ಈ ವೇಳೆ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಮಾರುತ ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ.
ಅಸ್ಸಾಂ ಬಳಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದಿದೆ. ಈ ಪರಿಸ್ಥಿತಿಯಿಂದಾಗಿ ಈ ಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿರುಗಾಳಿ ಸಹಿತ ಮಳೆಗೆ ಸಿಲುಕಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದರು -ಪಿಟಿಐ ಚಿತ್ರಪಶ್ಚಿಮ ಬಂಗಾಳ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ. ಸುಮಾರು 200 ಜನರು ನಿರಾಶ್ರಿತರಾಗಿದ್ದಾರೆ. ಹಲವಾರು ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಿ ಸಂತ್ರಸ್ತರಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ರಕ್ಷಣಾ ತಂಡಗಳು ಕೆಲಸ ಮಾಡುತ್ತಿವೆ.
ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಲಪಾಈಗುಡಿ ಜಿಲ್ಲೆಗೆ ಭಾನುವಾರ ರಾತ್ರಿಯೇ ಭೇಟಿ ನೀಡಿ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ.
'ಗಾಯಗೊಂಡವರ ಸಂಖ್ಯೆ ತುಸು ಹೆಚ್ಚೇ ಇದೆ. ಗಾಯಾಳುಗಳು ಮತ್ತು ಮೃತರ ಕುಟುಂಬಗಳ ಸದಸ್ಯರನ್ನು ಭೇಟಿ ಆಗಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪರಿಹಾರಧನ ವಿತರಣೆ ಕುರಿತು ಮಾತನಾಡಲು ನನಗೆ ಸಾಧ್ಯವಿಲ್ಲ' ಎಂದು ಮಮತಾ ಅವರು ಸುದ್ದಿಗಾರರ ಎದುರು ಹೇಳಿದರು.
ರಾಜ್ಯದ ರಾಜ್ಯಪಾಲ ವಿ.ಸಿ. ಬೋಸ್ ಅವರು ಸೋಮವಾರ ಬಿರುಗಾಳಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ. ಬಾಧಿತ ಪ್ರದೇಶಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
'ಸುಳಿವು ನೀಡದೇ ಬಿರುಗಾಳಿ ಸಹಿತ ಮಳೆಯಾಗಿದೆ. ಯಾವಾಗ ಮತ್ತು ಹೇಗೆ ನಾವು ಮನೆಯನ್ನು ಮರು ನಿರ್ಮಾಣ ಮಾಡುತ್ತೇವೆ ಎಂಬುದು ತಿಳಿಯದಾಗಿದೆ' ಎಂದು ಪಶ್ಚಿಮ ಬಂಗಾಳದ ಮೈನ್‌ಪುರಿಯ ನಿವಾಸಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.