ಕಾಸರಗೋಡು: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-66 ಅಭಿವೃದ್ಧಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಕಳೆದ ಆರು ತಿಂಗಳಲ್ಲಿ ರಾ.ಹೆದ್ದಾರಿಯ ವಿವಿದೆಡೆ 108 ವಾಹನ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 13 ಮಂದಿ ಸಾವಿಗೀಡಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ. 2023 ಸೆಪ್ಟಂಬರ್ ತಿಂಗಳಲ್ಲಿ 19 ವಾಹನ ಅಪಘಾತ ಸಂಭವಿಸಿದೆ. ಇದರಲ್ಲೋರ್ವ ಸಾವಿಗೀಡಾಗಿ 20 ಮಂದಿ ಗಾಯಗೊಂಡಿದ್ದರು. ಅಕ್ಟೋಬರ್ ತಿಂಗಳಲ್ಲಿ 13 ವಾಹನ ಅಪಘಾತ ಸಂಭವಿಸಿದ್ದು, ಇಬ್ಬರು ಸಾವಿಗೀಡಾಗಿ 12 ಮಂದಿ ಗಾಯಗೊಂಡಿದ್ದರು. ನವಂಬರ್ ತಿಂಗಳಲ್ಲಿ 19 ಅಪಘಾತಗಳು ಸಂಭವಿಸಿದ್ದು, ಇಬ್ಬರು ಸಾವಿಗೀಡಾಗಿದ್ದರು. 20 ಮಂದಿ ಗಾಯಗೊಂಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ 20 ವಾಹನ ಅಪಘಾತಗಳು ಸಂಭವಿಸಿದ್ದು, ಮೂವರು ಸಾವಿಗೀಡಾಗಿ 25 ಮಂದಿ ಗಾಯಗೊಂಡಿದ್ದರು.
2024 ರ ಜನವರಿ ತಿಂಗಳಲ್ಲಿ 21 ವಾಹನ ಅಪಘಾತಗಳು ಉಂಟಾಗಿದ್ದು ಮೂವರು ಸಾವಿಗೀಡಾಗಿದ್ದರು. 25 ಮಂದಿ ಗಾಯಗೊಂಡಿದ್ದರು. ಫೆಬ್ರವರಿ ತಿಂಗಳಲ್ಲಿ 16 ವಾಹನ ಅಪಘಾತಗಳಲ್ಲಿ, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. 19 ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಂತೆ ಕಾಮಗಾರಿ ನಡೆಯುತ್ತಿದ್ದು, ಜಿಲ್ಲೆಯ ಹಲವೆಡೆಗಳಲ್ಲಿ ವಾಹನಗಳು ಸಾಗುವ ದಾರಿಯನ್ನು ಪದೇ ಪದೇ ಬದಲಾಯಿಸಲಾಗುತ್ತಿದೆ. ಇಂದು ಸಾಗಿದ ದಾರಿ ನಾಳೆ ಇನ್ನೊಂದೆಡೆಗೆ ದಿಢೀರ್ ಆಗಿ ಬದಲಾಗುವ ಸ್ಥಿತಿಯೂ ಇನ್ನೊಂದೆಡೆ ಇದೆ. ಇದು ವಾಹನ ಚಾಲಕರಲ್ಲಿ ಸದಾ ಗೊಂದಲ ಸೃಷ್ಟಿಸುತ್ತಿದೆ. ಮಾತ್ರವಲ್ಲದೆ ಅದು ವಾಹನ ಅಪಘಾತಗಳಿಗೂ ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ದಾರಿಯುದ್ದಕ್ಕೂ ಹಲವೆಡೆಗಳಲ್ಲಿ ರಸ್ತೆಗಳನ್ನು ಕೋಟೆಗಳ ರೀತಿ ನಿರ್ಮಿಸಲಾಗಿದೆ. ಇದರಿಂದಾಗಿ ವಾಹನಗಳು ಮಾತ್ರವಲ್ಲ ಜನರಿಗೂ ರಸ್ತೆ ದಾಟದ ಸ್ಥಿತಿಯೂ ಇದೆ. ಕಿಲೋ ಮೀಟರ್ ತನಕ ಸಾಗಿ ಅಂಡರ್ ಪ್ಯಾಸೇಜ್ ಮೂಲಕ ವಾಹನಗಳು ಮತ್ತು ಜನರು ಒಂದು ರಸ್ತೆಯಿಂದ ಇನ್ನೊಂದು ರಸ್ತೆ ದಾಟಬೇಕಾದ ಸ್ಥಿತಿಯೂ ಈಗ ನಿರ್ಮಾಣವಾಗಿದೆ. ಕಾಸರಗೋಡು ನಗರದ ಕರಂದಕ್ಕಾಡಿನಲ್ಲಿ ವಾಹನಗಳಿಗೆ ರಸ್ತೆ ದಾಟಬೇಕಾಗಿದ್ದಲ್ಲಿ ಅಲ್ಲಿಂದ ಸುಮಾರು ಅ`ರ್À ಕಿಲೋ ಮೀಟರ್ ದೂರವಿರುವ ಅಡ್ಕತ್ತಬೈಲ್‍ಗೆ ಸಾಗಿ ಅಲ್ಲಿಂದ ದಾಟ ಬೇಕಾದ ಸ್ಥಿತಿ ಉಂಟಾಗಿದೆ. ಕಾಸರಗೋಡು ಅಗ್ನಿಶಾಮಕ ದಳ ಕೇಂದ್ರವಿರುವ ಪ್ರದೇಶವೂ ಆಗಿರುವ ಕರಂದಕ್ಕಾಡಿನಿಂದ ಅಗ್ನಿಶಾಮಕ ದಳಕ್ಕೆ ತುರ್ತಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ಈ ವಾಹನಗಳಿಗೂ ಕಿಲೋ ಮೀಟರ್ ತನಕ ಸುತ್ತಾಡಿ ರಸ್ತೆ ದಾಟಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಗ್ನಿಶಾಮಕ ದಳ ಕೇಂದ್ರದ ಬಳಿಯಲ್ಲೇ ರಸ್ತೆ ದಾಟುವ ಸೌಕರ್ಯ ಏರ್ಪಡಿಸಬೇಕೆಂಬ ಬೇಡಿಕೆಯೂ ಜನರಿಂದ ಉಂಟಾಗಿದೆ.