ದರ್ಭಾಂಗಾ: ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಬೆಂಕಿ ಹೊತ್ತಿಕೊಂಡು, 6 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

ಸುನೀಲ್ ಪಾಸ್ವಾನ್ (26), ಲೀಲಾ ದೇವಿ (23), ಕಾಂಚನ ದೇವಿ (26), ಸಿದ್ದಾಂತ್ ಕುಮಾರ್ (4), ಶಶಾಂಕ್ ಕುಮಾರ್ ( 3 ) ಮತ್ತು ಸಾಕ್ಷಿ ಕುಮಾರಿ (5) ಮೃತರು.
ಬಹೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿನಗರದಲ್ಲಿ ಗುರುವಾರ ರಾತ್ರಿ 11.15 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಪಟಾಕಿ ಸಿಡಿಸುವ ವೇಳೆ ಮಂಟಪಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಂಟಪದಲ್ಲಿ ಇರಿಸಲಾಗಿದ್ದ ಕೆಲವು ದಹನಕಾರಿ ವಸ್ತುಗಳಿಂದ ಬೆಂಕಿ ವೇಗವಾಗಿ ಹರಡಿದೆ. ಘಟನೆಯಲ್ಲಿ ಮೂರು ಹಸುಗಳೂ ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
'ಘಟನೆಗೆ ನಿಖರ ಕಾರಣ ಕಂಡುಹಿಡಿಯಲು ತನಿಖೆಗೆ ಆದೇಶಿಸಿದ್ದೇನೆ. ವಿಪತ್ತು ನಿರ್ವಹಣಾ ಮಾರ್ಗಸೂಚಿಗಳ ಪ್ರಕಾರ ಸಂತ್ರಸ್ತರ ಕುಟುಂಬಗಳಿಗೆ ಜಿಲ್ಲಾಡಳಿತ ಎಲ್ಲ ರೀತಿಯ ನೆರವು ನೀಡುತ್ತಿದೆ' ಎಂದು ಜಿಲ್ಲಾಧಿಕಾರಿ ರಾಜೀವ್ ರೋಷನ್ ಪಿಟಿಐಗೆ ತಿಳಿಸಿದ್ದಾರೆ.
'ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸದ್ಯ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ' ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಗುನಾಥ ರೆಡ್ಡಿ ತಿಳಿಸಿದ್ದಾರೆ.