ಲಖನೌ: ಅಯೋಧ್ಯೆಯ ಬಾಲರಾಮನನ್ನು ನಿದ್ದೆ ಮಾಡಲು ಬಿಡದೆ 72 ಗಂಟೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಬಹುದೇ? ಎಂದು ಸಂತರು ರಾಮ ಮಂದಿರ ಆಡಳಿತ ಮಂಡಳಿಯನ್ನು ಪ್ರಶ್ನಿಸುತ್ತಿದ್ದಾರೆ.
ಏಪ್ರಿಲ್ 17ರಂದು ರಾಮನವಮಿ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಬಾಲರಾಮನ ದರ್ಶನಕ್ಕೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.
'ರಾಮಲಲ್ಲಾ ಕೇವಲ 5 ವರ್ಷದ ಬಾಲಕ. ಅಷ್ಟು ದೀರ್ಘಾವಧಿ ಆತನನ್ನು ನಿದ್ದೆ ಮಾಡಲು ಬಿಡದೆ ಎಚ್ಚರದಿಂದಿರಿಸುವುದು ಸರಿಯಲ್ಲ.. ಧರ್ಮಗ್ರಂಥಗಳು ಮತ್ತು ಶಾಸ್ತ್ರಗಳ ಪ್ರಕಾರವೂ ಇದು ಸರಿಯಲ್ಲ'ಎಂದು ಅಯೋಧ್ಯೆ ಮೂಲದ ಸಂತರೊಬ್ಬರು ಹೇಳಿದ್ದಾರೆ.
ರಾಮಲಲ್ಲಾ ಪ್ರತಿದಿನ ಕೆಲ ಗಂಟೆಗಳ ಕಾಲವಾದರೂ ನಿದ್ದೆ ಮಾಡಬೇಕು. ಭಕ್ತರು ದರ್ಶನ ಪಡೆಯಬೇಕೆಂಬ ಕಾರಣಕ್ಕೆ ನಿದ್ದೆ ಮಾಡದಂತೆ ತಡೆಯುವುದು ಸರಿಯಲ್ಲ. ಕೇವಲ ಭಕ್ತರ ಅನುಕೂಲವನ್ನಷ್ಟೇ ನಾವು ನೋಡಬಾರದು. ಸಂಪ್ರದಾಯದಲ್ಲಿ ಇಲ್ಲದ ಕಾರ್ಯಗಳನ್ನು ಮಾಡಬಾರದು ಎಂದು ಮತ್ತೊಬ್ಬ ಸಂತರು ಹೇಳಿದ್ದಾರೆ.
ಈ ಕುರಿತ ನಿರ್ಧಾರವನ್ನು ಶುಕ್ರವಾರದ ಟ್ರಸ್ಟ್ ಸದಸ್ಯರ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಸದ್ಯ, ರಾಮ ಮಂದಿರದಲ್ಲಿ 14 ಗಂಟೆಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ನಿತ್ಯ 1 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಿದ್ದಾರೆ.
ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು.