HEALTH TIPS

ಚಿನ್ನದ ನಾಗಾಲೋಟ: ಇದೇ ವರ್ಷ 72 ಸಾವಿರ ರೂ.ಗೆ ಏರಿಕೆ ಆಗುವ ಸಾಧ್ಯತೆ, ಕಾರಣ ಹೀಗಿದೆ

 ಭಾರತದಲ್ಲಿ ಈಗ ಮದುವೆಗಳ ಸೀಜನ್. ಹಾಗಾಗಿ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬಂಗಾರದ ಬೆಲೆ 10 ಗ್ರಾಂಗೆ 71 ಸಾವಿರ ರೂ. ಗಡಿ ದಾಟಿ ಸಾರ್ವಕಾಲಿಕ ಏರಿಕೆ ಕಂಡಿದೆ. ಇನ್ನೂ ಕೆಲ ಕಾಲ ಚಿನ್ನದ ನಾಗಾಲೋಟ ಮುಂದುವರಿಯಲಿದ್ದು, ಬೆಲೆ ಮತ್ತಷ್ಟು ಹೆಚ್ಚಲಿದೆ ಎಂದಿದ್ದಾರೆ ಮಾರುಕಟ್ಟೆ ತಜ್ಞರು.

ಬೆಲೆ ಎಷ್ಟೇ ಹೆಚ್ಚಳವಾದರೂ ಭಾರತದಲ್ಲಿ ಚಿನ್ನದ ಮೇಲಿನ ವ್ಯಾಮೋಹ ಕಡಿಮೆಯಾಗುವುದಿಲ್ಲ. ಬೆಲೆಬಾಳುವ ಈ ಲೋಹ ಸುರಕ್ಷಿತ ಹೂಡಿಕೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಜಾಗತಿಕ ಆರ್ಥಿಕತೆಯಲ್ಲಿ ಏರಿಳಿತ ಕಂಡಾಗಲೆಲ್ಲ ಹೂಡಿಕೆದಾರರ ರಕ್ಷಣೆಗೆ ಬರುವುದು ಚಿನ್ನ ಮಾತ್ರ. ಅದರಲ್ಲೂ, ಭಾರತದಲ್ಲಿ ಈಗ ಮದುವೆಗಳ ಸೀಜನ್. ಚಿನ್ನವಿಲ್ಲದೆ ಮದುವೆಗಳು ನಡೆಯುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಂಥ ಸ್ಥಿತಿ ಇದೆ. ಸ್ಥಿತಿವಂತರು ಮಾತ್ರವಲ್ಲ, ಮಧ್ಯಮ ವರ್ಗದವರು, ಕೆಳ ಮಧ್ಯಮವರ್ಗದವರು ಸಹ ಸಾಲ ಮಾಡಿಯಾದರೂ ಮದುವೆಗೆ ಚಿನ್ನ ಖರೀದಿಸುತ್ತಾರೆ. ಆದರೆ, ಚಿನ್ನದ ಬೆಲೆ ಮಾತ್ರ ವೇಗವಾಗಿ ಏರಿಕೆ ಕಾಣುತ್ತಿದ್ದು, ಕಳೆದ 10 ದಿನಗಳಲ್ಲೇ 3500-4000 ರೂ.ನಷ್ಟು ಹೆಚ್ಚಳವಾಗಿದೆ. ಮೇ ಅಂತ್ಯದವರೆಗೆ ಮದುವೆ ಮುಹೂರ್ತಗಳಿರುವುದರಿಂದ ಬಂಗಾರ ಮತ್ತಷ್ಟು ದುಬಾರಿ ಆಗಲಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು. ಹಾಗಾಗಿ, ಚಿನ್ನ ಖರೀದಿಗೆ, ಚಿನ್ನದಲ್ಲಿ ಹೂಡಿಕೆಗೆ ಇದು ಸೂಕ್ತಕಾಲವಾಗಿದೆ ಎಂದಿದ್ದಾರೆ ತಜ್ಞರು.

ಇದೇ ಮೊದಲ ಬಾರಿಗೆ 10 ಗ್ರಾಂ ಚಿನ್ನದ (24 ಕ್ಯಾರೆಟ್ ಗೋಲ್ಡ್) ಬೆಲೆ 71 ಸಾವಿರ ರೂ. ದಾಟಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್​ನ 10 ಗ್ರಾಂ ಬಂಗಾರದ ಬೆಲೆ ಶುಕ್ರವಾರ 69,980 ರೂ. ಇದ್ದರೆ, ಶನಿವಾರ 71,290 ರೂ. ದಾಟಿತು. ಮದುವೆ ಸೀಜನ್ ಮುಗಿಯುವುದರೊಳಗೆ 72 ಸಾವಿರದ ಗಡಿಯನ್ನು ದಾಟುವ ಸಾಧ್ಯತೆ ಇದೆ. 22 ಕ್ಯಾರೆಟ್​ನ 10 ಗ್ರಾಂ ಬಂಗಾರದ ಬೆಲೆ ಶುಕ್ರವಾರ 64,150 ರೂ. ಇದ್ದರೆ, ಶನಿವಾರ 65,350 ರೂ.ಗೆ ತಲುಪಿದೆ.

ಕಳೆದ ಆರು ತಿಂಗಳಲ್ಲೇ ಚಿನ್ನ ಶೇಕಡ 25ರಷ್ಟು, ಕಳೆದ ಮೂರು ತಿಂಗಳಲ್ಲೇ ಶೇ.10ರಷ್ಟು ರಿಟರ್ನ್ಸ್ ನೀಡಿದೆ. 6 ತಿಂಗಳ ಹಿಂದೆ 57 ಸಾವಿರ ರೂ. ಇದ್ದ ಚಿನ್ನದ ಬೆಲೆ ಈಗ 71 ಸಾವಿರ ರೂ. ದಾಟಿದೆ. ಖರೀದಿ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಸದ್ಯದಲ್ಲಂತೂ ಬೆಲೆ ಇಳಿಕೆಯಾಗುವ ಯಾವುದೇ ಸಾಧ್ಯತೆಗಳಿಲ್ಲ. 2025ರವರೆಗೂ ಚಿನ್ನದ ನಾಗಾಲೋಟ ಅಬಾಧಿತವಾಗಿ ಮುಂದುವರಿಯಲಿದೆ.

ಕಳೆದ ವರ್ಷದ (2023) ಉದಾಹರಣೆಯನ್ನೇ ತೆಗೆದುಕೊಂಡರೆ ಚಿನ್ನದ ಬೆಲೆ ಒಂದೇ ವರ್ಷದಲ್ಲಿ 10 ಗ್ರಾಂಗೆ 8 ಸಾವಿರಕ್ಕಿಂತ ಅಧಿಕ ಹೆಚ್ಚಳ ಕಂಡಿದೆ. 2023 ಜನವರಿಯಲ್ಲಿ 54,867 ರೂ. ಇದ್ದ ದರ 2023 ಡಿಸೆಂಬರ್​ನಲ್ಲಿ 63,246 ರೂ.ಗೆ ತಲುಪಿತು. ಅಂದರೆ, 8,379 (ಶೇಕಡ 16) ರೂ.ಗಳಷ್ಟು ಹೆಚ್ಚಳ ಕಂಡುಬಂತು. 2023 ಜನವರಿಯಲ್ಲಿ 1 ಕೆಜಿ ಬೆಳ್ಳಿಯ ಬೆಲೆ 68,092 ರೂ. ಇದ್ದದ್ದು 2023 ಡಿಸೆಂಬರ್​ನಲ್ಲಿ 73,395 ರೂ.ಗೆ ತಲುಪಿ, 5,303 ರೂ.ಗಳ ಏರಿಕೆ ದಾಖಲಿಸಿತು.

ದಾಖಲೆ ಸೃಷ್ಟಿಸಿದ ಬೆಳ್ಳಿ ಬೆಲೆ
ಬೆಳ್ಳಿಯ ದರ ಕೂಡ ಗಣನೀಯವಾಗಿ ಏರಿಕೆ ಕಂಡಿರುವುದು ಗಮನಾರ್ಹ. ಬೆಂಗಳೂರಿನಲ್ಲಿ ಶುಕ್ರವಾರ 1 ಕೆಜಿ ಬೆಳ್ಳಿಯ ದರ 80,300 ರೂ. ಇತ್ತು. ಶನಿವಾರ 82,400 ರೂ.ಗೆ ಏರಿಕೆಯಾಗಿದ್ದು, ಸಾರ್ವಕಾಲಿಕ ಏರಿಕೆ ದಾಖಲಿಸಿದೆ.

ಕಾಡುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ

* ಚಿನ್ನದ ಬೆಲೆ ಸದ್ಯದಲ್ಲೇ ಇಳಿಕೆ ಕಾಣಲಿದೆಯೇ?

ಇಲ್ಲ. 2025ರವರೆಗೂ ಏರುಮುಖದಲ್ಲೇ ಸಾಗಲಿದೆ. ಈ ವರ್ಷ (2024) ಕೂಡ ಮತ್ತಷ್ಟು ಹೆಚ್ಚಳವಾಗಲಿದೆ.

* ಈಗಾಗಲೇ 71 ಸಾವಿರ ರೂ. ದಾಟಿದ್ದು, ಮತ್ತೆ ಎಷ್ಟು ಏರಿಕೆಯಾಗಬಹುದು?

ಈ ವರ್ಷಾಂತ್ಯದ ಹೊತ್ತಿಗೆ 72 ಸಾವಿರ ರೂ. ಗಡಿ ದಾಟುವ ಸಾಧ್ಯತೆ ಇದೆ.

* ಚಿನ್ನದ ಮೇಲಿನ ಹೂಡಿಕೆ ಉತ್ತಮ ರಿಟರ್ನ್ಸ್ ನೀಡುತ್ತಿದೆಯೇ?

ಹೌದು, ಇದರಿಂದಾಗಿಯೇ ಖರೀದಿ ಪ್ರಮಾಣ ಹೆಚ್ಚಳವಾಗಿದೆ. ಕಳೆದ ಆರು ತಿಂಗಳಲ್ಲೇ ಶೇಕಡ 25ರಷ್ಟು ರಿಟರ್ನ್ಸ್ ನೀಡಿದೆ.

* ಚಿನ್ನದ ಮೇಲೆ ಹೂಡಿಕೆಗೆ ಇದು ಸಕಾಲವೆ?ಹೌದು, ಬೆಲೆ ಮತ್ತಷ್ಟು ಹೆಚ್ಚಲಿರುವ ಹಿನ್ನೆಲೆಯಲ್ಲಿ ಚಿನ್ನ ಖರೀದಿಗೆ ಇದು ಸಕಾಲ ಎಂಬುದು ತಜ್ಞರ ಅಭಿಪ್ರಾಯ.

ಏರಿಕೆಗೆ ಕಾರಣ
* ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರದ ಬಗ್ಗೆ ಅನಿಶ್ಚಿತತೆ ಮುಂದುವರಿದಿರುವುದು.
* ಭಾರತದ ಮಾರುಕಟ್ಟೆಯಲ್ಲಿ ಬೇಡಿಕೆ ತೀವ್ರವಾಗಿ ಹೆಚ್ಚಳಗೊಂಡಿರುವುದು.
* ಮದುವೆ ಸೀಜನ್ ನಡೆಯುತ್ತಿರುವುದು.
* ಸುರಕ್ಷಿತ ಹೂಡಿಕೆಗಾಗಿ ಚಿನ್ನದ ಮೇಲಿನ ಅವಲಂಬನೆ ಹೆಚ್ಚಿರುವುದು.
* ಹಣದುಬ್ಬರ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ.
* ಚಿನ್ನದ ಮೇಲೆ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಹೆಚ್ಚುತ್ತಿರುವ ವ್ಯಾಮೋಹ.

ನಿಮಗೆ ಗೊತ್ತೆ?
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅಂದರೆ 1947ರಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ಬರೀ 32 ರೂ. ಇತ್ತು. 1964ರಲ್ಲಿ 63 ರೂ., 1974ರಲ್ಲಿ 506 ರೂ., 1984ರಲ್ಲಿ 1,970 ರೂ., 1990ರಲ್ಲಿ 3,200 ರೂ. ಇತ್ತು.

ಬೇಡಿಕೆ ಹೆಚ್ಚಳ
ಚೀನಾ ನಂತರ ಚಿನ್ನಕ್ಕೆ ಅತಿ ಹೆಚ್ಚು ಬೇಡಿಕೆ ಇರುವುದು ಭಾರತದಲ್ಲಿ. ಚೀನಾದ ಕೇಂದ್ರೀಯ ಬ್ಯಾಂಕ್ ಅತಿ ಹೆಚ್ಚು ಚಿನ್ನ ಖರೀದಿಸುತ್ತಿರುವುದರೊಂದಿಗೆ ಅಲ್ಲಿನ ಜನತೆಗೆ ತಮ್ಮಿಂದಾದಷ್ಟು ಚಿನ್ನ ಖರೀದಿಸುವಂತೆಯೂ ಉತ್ತೇಜಿಸುತ್ತಿದೆ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ದೇಶದ ಒಟ್ಟಾರೆ ಚಿನ್ನದ ಬೇಡಿಕೆಯಲ್ಲಿ ಶೇಕಡ 60ರಷ್ಟು ಬೇಡಿಕೆ ಗ್ರಾಮೀಣ ಪ್ರದೇಶದಿಂದ ಬರುತ್ತದೆ. ಕಳೆದ ಎರಡು ದಶಕಗಳಲ್ಲಿ ಗ್ರಾಮೀಣ ಜನರ ಆದಾಯ ಮತ್ತು ಅವರು ಮಾಡುವ ವೆಚ್ಚದಲ್ಲಿ ಏರಿಕೆಯಾಗಿದೆ. ಇದರಿಂದ ಅವರು ಹೆಚ್ಚು ಹೆಚ್ಚು ಚಿನ್ನ ಖರೀದಿಗೆ ಮುಂದಾಗುತ್ತಿದ್ದಾರೆ. ಇನ್ನು, ಮೇಲ್ಮಧ್ಯಮ ವರ್ಗದವರು ಸುರಕ್ಷಿತ ಹೂಡಿಕೆ ಎಂದು ಚಿನ್ನದ ಕಡೆ ಮುಖ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries