ವಾಷಿಂಗ್ಟನ್: ಯುದ್ಧಪೀಡಿತ ಉಕ್ರೇನ್ ಮತ್ತು ಇಸ್ರೇಲ್‌ಗಳಿಗೆ 95.3 ಶತಕೋಟಿ ಡಾಲರ್ (₹7.9 ಲಕ್ಷ ಕೋಟಿ) ನೆರವು ಒದಗಿಸುವ ಮತ್ತು ತೈವಾನ್ ಸೇರಿದಂತೆ ಹಿಂದೂ ಮಹಾಸಾಗರ- ಫೆಸಿಫಿಕ್ ಪ್ರದೇಶದಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಭದ್ರತೆಯನ್ನು ಬಲಪಡಿಸುವ ಮಸೂದೆಗೆ ಅಮೆರಿಕ ಸಂಸತ್ತು ಹೆಚ್ಚಿನ ಮತಗಳೊಂದಿಗೆ ಬೆಂಬಲ ನೀಡಿದೆ.
ಮಂಗಳವಾರ ಹೌಸ್ ಆಫ್ ರಿಪ್ರೆಸೆಂಟಿಟಿವ್ಸ್ (ಪ್ರತಿನಿಧಿಗಳ ಸಭೆ) ಈ ಮಸೂದೆಯನ್ನು 79- 18 ಮತಗಳಿಂದ ಅಂಗೀಕರಿಸಿದೆ. ಮಸೂದೆಗೆ ಅಧ್ಯಕ್ಷ ಜೋ ಬೈಡನ್ ಸಹಿಗಾಗಿ ಶ್ವೇತಭವನಕ್ಕೆ ಕಳುಹಿಸಲಾಗುತ್ತದೆ.
'ಮಸೂದೆಗೆ ಶೀಘ್ರ ಸಹಿ ಮಾಡುತ್ತೇನೆ. ಈ ವಾರದಿಂದಲೇ ನಾವು ಉಕ್ರೇನ್‌ಗೆ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ತಲುಪಿಸಲು ಪ್ರಾರಂಭಿಸಬಹುದು' ಎಂದು ಬೈಡನ್ ಹೇಳಿದ್ದಾರೆ.
ತುರ್ತು ಅಗತ್ಯವಿದೆ: 'ಉಕ್ರೇನ್ ರಷ್ಯಾದಿಂದ ನಿರಂತರ ಬಾಂಬ್ ದಾಳಿಯನ್ನು ಎದುರಿಸುತ್ತಿದೆ. ಇರಾನ್‌ನಿಂದ ಹೆಚ್ಚಿನ ದಾಳಿ ಎದುರಿಸಿರುವ ಇಸ್ರೇಲ್, ಗಾಜಾ, ಸುಡಾನ್ ಮತ್ತು ಹೈಟಿ ಸೇರಿದಂತೆ ಪ್ರಪಂಚಾದ್ಯಂತ ಸಂಘರ್ಷ ಮತ್ತು ನೈಸರ್ಗಿಕ ವಿಕೋಪಗಳಿಂದ ತತ್ತರಿಸಿರುವವರಿಗೆ ಮತ್ತು ಹಿಂದೂ ಮಹಾಸಾಗರ- ಫೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಮತ್ತ ಸ್ಥಿರತೆಯನ್ನು ಹೆಚ್ಚಿಸುವುದು ತುರ್ತು ಅಗತ್ಯವಾಗಿದೆ' ಎಂದು ಅವರು ತಿಳಿಸಿದ್ದಾರೆ.
ಅಂಗೀಕಾರಗೊಂಡಿರುವ ಮಸೂದೆಯು ಒಟ್ಟು ನಾಲ್ಕು ಭಾಗಗಳನ್ನು ಹೊಂದಿದ್ದು ಈ ಪೈಕಿ ಉಕ್ರೇನ್‌ಗೆ ₹5 ಲಕ್ಷ ಕೋಟಿ ನೆರವು, ಇಸ್ರೇಲ್ ಮತ್ತು ಮಾನವೀಯ ಪರಿಹಾರಕ್ಕಾಗಿ ₹2.9 ಲಕ್ಷ ಕೋಟಿ, ತೈವಾನ್ ಮತ್ತು ಇತರ ಹಿಂದೂ ಮಹಾಸಾಗರ- ಫೆಸಿಫಿಕ್ ಪ್ರದೇಶದ ಮಿತ್ರರಾಷ್ಟ್ರಗಳು, ಟಿಕ್‌ಟಾಕ್ ಸಂಬಂಧಿತ ಹಾಗೂ ರಷ್ಯಾದ ಆಸ್ತಿಗಳ ಕುರಿತು ಇತರ ವ್ಯವಹಾರಗಳಿಗೆ ₹67 ಸಾವಿರ ಕೋಟಿ ಹಣವನ್ನು ನೀಡಲಾಗಿದೆ.