ಕೊಚ್ಚಿ: ಮಲಯಾಳಂನ ಸೂಪರ್ ಹಿಟ್ 'ರಾಬಿನ್ಹುಡ್' ಸಿನಿಮಾವನ್ನು ನಿರ್ದೇಶಿಸಿದ ಖ್ಯಾತ ನಿರ್ದೇಶಕ ಜೋಶಿಗೆ ಮುಂದೊಮ್ಮೆ ತನ್ನದೇ ಮನೆಯಲ್ಲೇ ದೊಡ್ಡ ಕಳ್ಳತನ ನಡೆಯುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಎಟಿಎಂನಿಂದ ಹಣ ಕದಿಯುವ ಮೂಲಕ ತನಗೆ ಅನ್ಯಾಯ ಮಾಡಿದವರ ಮೇಲೆ ನಾಯಕ ಸೇಡು ತೀರಿಸಿಕೊಳ್ಳುವುದೇ ರಾಬಿನ್ಹುಡ್ ಸಿನಿಮಾ ಕತೆ. ಈ ಸಿನಿಮಾ 2008ರಲ್ಲಿ ತೆರೆಕಂಡಿತು.
ನಿರ್ದೇಶಕ ಜೋಶಿ ಮನೆಗೆ ಕನ್ನ ಹಾಕಿದ ಆರೋಪಿಯನ್ನು ಮುಹಮ್ಮದ್ ಇರ್ಫಾನ್ ಎಂದು ಗುರುತಿಸಲಾಗಿದೆ. ಈತನ ಮೇಲೆ 13 ರಾಜ್ಯಗಳಲ್ಲಿ 40ಕ್ಕೂ ಅಧಿಕ ಸುಲಿಗೆ ಪ್ರಕರಣಗಳು ದಾಖಲಾಗಿವೆ. ಈತನನ್ನು ಬಿಹಾರದ ರಾಬಿನ್ಹುಡ್ ಎಂದು ಕರೆಯುತ್ತಾರೆ. ಏಕೆಂದರೆ, ಈ ಕದ್ದ ಹಣದಿಂದ ಸ್ಥಳೀಯ ಬಡವರ ಅಗತ್ಯತೆಗಳನ್ನು ಪೂರೈಸುತ್ತಿದ್ದ. ಸೂಪರ್ ಕಳ್ಳ ಮತ್ತು ಜಾಗ್ವಾರ್ ಎಂತಲೂ ಈತನನ್ನು ಕರೆಯುತ್ತಾರೆ. ಸ್ಥಳೀಯ ಜನರಿಗೆ ಈತ ಒಳ್ಳೆಯ ನಾಯಕನಾಗಿದ್ದನು.
ಆರೋಪಿ ಇರ್ಫಾನ್, ಶ್ರೀಮಂತ ಮನೆಗಳು ಮತ್ತು ಸಂಸ್ಥೆಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ. 2021ರ ಏಪ್ರಿಲ್ 14 ರಂದು, ತಿರುವನಂತಪುರಂನಲ್ಲಿ ಪ್ರಮುಖ ಆಭರಣ ಮಾಲೀಕರ ಮನೆಯಲ್ಲಿ ಸುಲಿಗೆ ಮಾಡಿದ್ದ. ಬಳಿಕ ಇರ್ಫಾನ್ ಹೆಸರು ಕೇರಳ ಪೊಲೀಸ್ ದಾಖಲೆಗಳಲ್ಲಿ ದಾಖಲಾಯಿತು. ಆ ದಿನ ಇರ್ಫಾನ್ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣ ಹಾಗೂ 60 ಸಾವಿರ ರೂಪಾಯಿ ನಗದನ್ನು ಕಳ್ಳತನ ಮಾಡಿದ್ದ. ಈ ಘಟನೆ ನಡೆದ ಮರು ತಿಂಗಳಲ್ಲೇ ಗೋವಾದಲ್ಲಿ ಮತ್ತೊಂದು ಪ್ರಕರಣದಲ್ಲಿ ಇರ್ಫಾನ್‌ನನ್ನು ಬಂಧಿಸಲಾಯಿತು. ಆದರೆ, ಕೋವಿಡ್ ಹರಡಿದ ಕಾರಣ ಕೇರಳ ಪೊಲೀಸರಿಗೆ ಆತನನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ತಿಳಿದುಬಂದಿದೆ.
ಇರ್ಫಾನ್ ಮೊದಲು ಕಳ್ಳತನ ಮಾಡಿದ್ದು 2010ರಲ್ಲಿ. 2013 ರಲ್ಲಿ ದೆಹಲಿಯ ನ್ಯೂ ಫ್ರಂಟ್ ಕಾಲೋನಿಯಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ಮೊದಲ ಬಾರಿಗೆ ಇರ್ಫಾನ್‌ನನ್ನು ಬಂಧಿಸಲಾಯಿತು. ದೆಹಲಿ ಮತ್ತು ಬಂಗಾಳದ ಜೈಲುಗಳಲ್ಲಿ ಸೆರೆವಾಸ ಅನುಭವಿಸಿದನು. ಈ ಇಫಾರ್ನ್ ದೆಹಲಿ, ಬೆಂಗಳೂರು, ಹೈದರಾಬಾದ್ ಮತ್ತು ಕೋಲ್ಕತ್ತಾದ ಶ್ರೀಮಂತ ಏರಿಯಾಗಳಲ್ಲಿ ಲೂಟಿ ಮಾಡಿದ್ದಾನೆ.
ಜೋಶಿ ನಿವಾಸಕ್ಕೆ ಕನ್ನ
ಆರೋಪಿ ಇರ್ಫಾನ್ ಮಲಯಾಳಂ ನಿರ್ದೇಶಕ ಜೋಶಿ ಅವರ ನಿವಾಸದಿಂದ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ರೋಚಕ ಪ್ರಕರಣವನ್ನು ಕೇರಳ ಪೊಲೀಸರು ಇದೀಗ ಬಯಲಿಗೆಳೆದಿದ್ದಾರೆ. ನಿಖರವಾದ ತನಿಖೆಯ ನಂತರ, ಕರ್ನಾಟಕ ಪೊಲೀಸರ ನೆರವಿನಿಂದ ಕೇರಳ ಪೊಲೀಸರು ಆರೋಪಿ ಇರ್ಫಾನ್‌ನನ್ನು ಉಡುಪಿಯಲ್ಲಿ ಸೆರೆಹಿಡಿದಿದ್ದಾರೆ. ಆದಾಗ್ಯೂ, ಜೋಶಿ ಮನೆಯಲ್ಲಿ ನಡೆದ ಕಳ್ಳತನದ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ನೀಡಿಲ್ಲ.
ಇರ್ಫಾನ್ ಪತ್ನಿ ಜಿಲ್ಲಾ ಪಂಚಾಯತಿ ಸದಸ್ಯೆ
ಮುಹಮ್ಮದ್ ಇರ್ಫಾನ್ ಪತ್ನಿ ಗುಲ್ಶನ್ ಪರ್ವೀನ್ ಬಿಹಾರದ ಸೀತಾಮರ್ಹಿ ಜಿಲ್ಲಾ ಪಂಚಾಯತ್ ಸದಸ್ಯೆ. ಜಿಲ್ಲಾ ಪಂಚಾಯತ್ ಬೋರ್ಡ್ ಇರುವ ಕಾರಿನಲ್ಲೇ ಇರ್ಫಾನ್ ಕೊಚ್ಚಿಯನ್ನು ತಲುಪಿ, ಜೋಶಿ ಮನೆಯಲ್ಲಿ ದೋಚಿದ್ದಾರೆ. ಅಂದಹಾಗೆ ಮನೆಯವರ ವಿರೋಧದ ನಡುವೆಯೂ ಇರ್ಫಾನ್ ಮತ್ತು ಗುಲ್ಶನ್ ಇಬ್ಬರೂ ಪ್ರೀತಿಸಿ ಮದುವೆಯಾದರು. ಹೋಟೆಲ್ ಹಾಗೂ ಬಟ್ಟೆ ಅಂಗಡಿಯನ್ನು ನಡೆಸಿ ನಷ್ಟ ಅನುಭವಿಸಿದ ಇರ್ಫಾನ್ ಕೊನೆಗೆ ಕಳ್ಳತನಕ್ಕೆ ಮುಂದಾದ. ಕದ್ದ ಹಣದಿಂದಳೇ ಸ್ಥಳೀಯರಿಗೆ ಸಹಾಯ ಮಾಡಿ ಹೆಸರುವಾಸಿಯಾಗಿದ್ದ. ಇರ್ಫಾನ್ ಅವರ ಚಾರಿಟಿ ಕೆಲಸಗಳನ್ನು ಎತ್ತಿ ಪ್ರಚಾರ ಮಾಡಿದ ಗುಲ್ಶನ್ ಅವರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಆಯ್ಕೆಯಾದರು.
ಇರ್ಫಾನ್ ತನ್ನ ಹಳ್ಳಿ ಜೋಗಿಯಾದಲ್ಲಿ ದರೋಡೆ ಮಾಡಿದ ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಏಳು ರಸ್ತೆಗಳನ್ನು ನಿರ್ಮಿಸಿದ್ದಾನೆ. ಕಳ್ಳತನದ ಹಣದಲ್ಲಿ ಶೇ. 20 ರಷ್ಟನ್ನು ಬಡವರ ವೈದ್ಯಕೀಯ ಮತ್ತು ಮದುವೆಗಾಗಿ ದಾನ ಮಾಡುತ್ತಾರೆ. ಹೀಗಾಗಿ ಇವರನ್ನು ಬಿಹಾರದ ರಾಬಿನ್ ಹುಡ್ ಎಂದು ಕರೆಯುತ್ತಾರೆ.