ವಾಷಿಂಗ್ಟನ್: ಇಸ್ರೇಲ್‌ನ ಮೇಲೆ ಇರಾನ್ ನಡೆಸಿರುವ ಅಪ್ರಚೋದಿತ ಮತ್ತು ನೇರ ಸೇನಾ ದಾಳಿಗೆ ಜಿ-7 ಶೃಂಗದ ಸದಸ್ಯ ರಾಷ್ಟ್ರಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಈ ಬೆಳವಣಿಗೆಯು ಮಧ್ಯಪ್ರಾಚ್ಯದ ಪ್ರಾದೇಶಿಕ ಮಟ್ಟದಲ್ಲಿ ಅನಿಯಂತ್ರಿತ ಪ್ರಕ್ಷುಬ್ಧತೆಗೆ ನಾಂದಿಯಾಗಬಹುದು ಎಂದೂ ಆತಂಕ ವ್ಯಕ್ತಪಡಿಸಿವೆ.
ಇನ್ನೊಂದೆಡೆ, ಬಿಗುವಿನ ಸ್ಥಿತಿ ಶಮನಗೊಳಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಜಿಸಿ) ಶಾಶ್ವತ ಸದಸ್ಯ ರಾಷ್ಟ್ರಗಳ ತುರ್ತು ಸಭೆ ನ್ಯೂಯಾರ್ಕ್‌ನಲ್ಲಿ ನಡೆದಿದ್ದು, ವಸ್ತುಸ್ಥಿತಿ ಕುರಿತು ಚರ್ಚಿಸಲಾಯಿತು.
'ಇರಾನ್ ನೇರ ದಾಳಿಯು ಪ್ರಾದೇಶಿಕ ವಲಯದಲ್ಲಿ ಅಸ್ಥಿರತೆಗೆ ಕಾರಣವಾಗಿದೆ. ಇದನ್ನು ತಡೆಯಬೇಕಿದೆ' ಎಂದು ಜಿ-7 ರಾಷ್ಟ್ರಗಳ ನಾಯಕರು ಜಂಟಿ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಈ ನಾಯಕರ ಜೊತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ವರ್ಚುವಲ್ ವೇದಿಕೆಯಲ್ಲಿ ಸಭೆ ನಡೆಸಿ ಚರ್ಚಿಸಿದರು.
ಇರಾನ್‌ನ ನೇರ ಸೇನಾ ದಾಳಿಗೆ ಪ್ರತ್ಯುತ್ತರ ನೀಡಿರುವ ಅಮೆರಿಕ ಸೇನೆ ಬೆಂಬಲಿತ ಇಸ್ರೇಲ್, 12ಕ್ಕೂ ಅಧಿಕ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. 'ಯಾವುದೇ ರೀತಿಯ ಗಮನಾರ್ಹ ಹಾನಿ ಸಂಭವಿಸಿಲ್ಲ' ಎಂದು ಇಸ್ರೇಲ್‌ನ ಆಡಳಿತವು ಈ ಸಂಬಂಧ ಪ್ರತಿಕ್ರಿಯಿಸಿದೆ.
'ಇರಾನ್ ನಡೆಸಿರುವ ದಾಳಿಯನ್ನು ಜಿ-7 ರಾಷ್ಟ್ರಗಳು ಕಟುವಾಗಿ ಖಂಡಿಸಲಿವೆ. ಇಸ್ರೇಲ್ ಗುರಿಯಾಗಿಸಿ ನೂರಾರು ಡ್ರೋನ್, ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಸ್ನೇಹಿ ರಾಷ್ಟ್ರಗಳ ಸಹಕಾರದಿಂದಾಗಿ ಇಸ್ರೇಲ್ ದಾಳಿಯನ್ನು ವಿಫಲಗೊಳಿಸಲಾಯಿತು' ಎಂದು ಸಭೆಯ ಬಳಿಕ ಜಿ-7 ರಾಷ್ಟ್ರಗಳ ನಾಯಕರು ಹೇಳಿದ್ದಾರೆ.
ಅಮೆರಿಕ, ಇಟಲಿ, ಜಪಾನ್, ಜರ್ಮನಿ, ಫ್ರಾನ್ಸ್, ಬ್ರಿಟನ್, ಕೆನಡಾ ಜಿ-7 ಶೃಂಗದ ಸದಸ್ಯ ರಾಷ್ಟ್ರಗಳಾಗಿವೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ರೇಲ್ ಮತ್ತು ಅಲ್ಲಿನ ಪ್ರಜೆಗಳ ರಕ್ಷಣೆಗೆ ನಿಲ್ಲುವುದಾಗಿ ಬದ್ಧತೆ ಪ್ರದರ್ಶಿಸಿವೆ.
'ಗಾಜಾದಲ್ಲಿ ಮೂಡಿರುವ ಬಿಕ್ಕಟ್ಟು ಅಂತ್ಯಗೊಳಿಸುವುದು, ಕದನ ವಿರಾಮ ಘೋಷಣೆ, ಒತ್ತೆಯಾಳುಗಳ ಬಿಡುಗಡೆಗೂ ಒತ್ತು ನೀಡಲಿದ್ದು, ಪ್ಯಾಲೆಸ್ಟೀನ್‌ಗೆ ಮಾನವೀಯ ನೆರವು ಒದಗಿಸಲಿದ್ದೇವೆ' ಎಂದು ಜಿ-7 ರಾಷ್ಟ್ರಗಳ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಮೇಲಿನ ದಾಳಿ ವಿಷಯದ ಕುರಿತು ಜೋರ್ಡಾನ್ ರಾಜ 2ನೇ ಅಬ್ದುಲ್ಲಾ ಜೊತೆಗೂ ಚರ್ಚಿಸಿದರು. ಯಾವುದೇ ದಾಳಿಗೆ ಪ್ರತಿರೋಧ ಒಡ್ಡಲು ಸನ್ನದ್ಧವಾಗಿರುವ ನಿಟ್ಟಿನಲ್ಲಿ ಸೇನೆಯ 484, 335ನೇ ಫೈಟರ್ ಸ್ಕ್ವಾಡ್ರನ್ ಸದಸ್ಯರ ಜೊತೆಗೂ ಚರ್ಚಿಸಿದರು.
ವಿವಿಧ ರಾಷ್ಟ್ರಗಳ ಜೊತೆ ಚರ್ಚೆ:
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಅವರು ಜೋರ್ಡಾನ್, ಸೌದಿ ಅರೇಬಿಯಾ, ಟರ್ಕಿ, ಈಜಿಪ್ಟ್‌ನ ವಿದೇಶಾಂಗ ವ್ಯವಹಾರಗಳ ಸಚಿವರ ಜೊತೆಗೆ ಚರ್ಚಿಸಿದರು. ಅಲ್ಲದೆ, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಸೌದಿ ಮತ್ತು ಇಸ್ರೇಲ್‌ನ ರಕ್ಷಣಾ ಕಾರ್ಯದರ್ಶಿ ಜೊತೆ ಚರ್ಚಿಸಿದರು.
ಮಧ್ಯಪ್ರಾಚ್ಯ ವಲಯದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸದಂತೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಚರ್ಚೆ ನಡೆಯಿತು ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ತಿಳಿಸಿದ್ದಾರೆ.